ಬೆಂಗಳೂರು : ಯಾವುದೇ ಸಂಭಾವನೆ ಪಡೆಯದೇ ‘ಅರಣ್ಯ ಇಲಾಖೆ’ ರಾಯಭಾರಿಯಾಗಲು ಅನಿಲ್ ಕುಂಬ್ಳೆ ಒಪ್ಪಿಗೆ ನೀಡಿದ್ದಾರೆ.
ಈ ಬಗ್ಗೆ ಸಚಿವ ಈಶ್ವರ್ ಖಂಡ್ರೆ ಮಾಹಿತಿ ನೀಡಿದ್ದು, ಅರಣ್ಯ ಮತ್ತು ಪರಿಸರ ಸಂರಕ್ಷಣೆಯ ಹಿತಾಸಕ್ತಿಯಿಂದ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ, ಖ್ಯಾತ ಕ್ರಿಕೆಟಿಗ ಮತ್ತು ಮಾಜಿ ಭಾರತ ತಂಡದ ನಾಯಕರಾದ ಅನಿಲ್ ಕುಂಬ್ಳೆ ಅವರನ್ನು ಕರ್ನಾಟಕ ರಾಜ್ಯ ಅರಣ್ಯ ಮತ್ತು ವನ್ಯಜೀವಿ ರಾಯಭಾರಿಯಾಗಿ ನಾಮನಿರ್ದೇಶಿಸಲು ನಿರ್ಧರಿಸಿದ್ದೇವೆ. ಶ್ರೀ ಕುಂಬ್ಳೆ ಅವರು ಇತ್ತೀಚೆಗೆ ಕರ್ನಾಟಕ ವನ್ಯಜೀವಿ ಮಂಡಳಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.
ವನ್ಯಜೀವಿಗಳ ಮೇಲಿನ ಅಪಾರ ಕಾಳಜಿ, ಅರಣ್ಯದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಅವರು ಹೊಂದಿರುವ ಖ್ಯಾತಿಯಿಂದಾಗಿ ಅವರು ಈ ಜವಾಬ್ದಾರಿಗೆ ಅತ್ಯಂತ ಸೂಕ್ತ ವ್ಯಕ್ತಿಯಾಗಿದ್ದಾರೆ. ಅವರು ಯಾವುದೇ ಸಂಭಾವನೆ ಪಡೆಯದೇ, ಸಂಪೂರ್ಣವಾಗಿ ಸಮಾಜಮುಖಿ ಉದ್ದೇಶದಿಂದ ಈ ಸೇವೆಗಾಗಿ ಸಮ್ಮತಿಸಿರುವುದು ಹೆಮ್ಮೆಯ ವಿಷಯವಾಗಿದೆ. ಈ ನಿರ್ಧಾರದಿಂದ ನಮ್ಮ ರಾಜ್ಯದ ಅರಣ್ಯ ಸಂರಕ್ಷಣೆ, ವನ್ಯಜೀವಿ ರಕ್ಷಣೆ ಮತ್ತು ಪರಿಸರ ಜಾಗೃತಿಗೆ ಹೊಸ ದಿಕ್ಕು ಮತ್ತು ಚೈತನ್ಯ ದೊರೆಯಲಿದೆ ಎಂಬ ಭರವಸೆ ನನಗಿದೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.

