ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ, ಉತ್ತರಪ್ರದೆಶದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಮಳೆ ಅನಾಹುತದಲ್ಲಿ ಎಸ್ಐ ಓರ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ರವೀಂದ್ರ ಮಿಶ್ರಾ (58) ಮೃತ ಎಸ್ಐ. ಉತ್ತರ ಪ್ರದೆಶದ ಗಾಜಿಯಾಬಾದ್ ನಲ್ಲಿ ರಾತ್ರಿ ಸುರಿದ ಮಳೆಗೆ ಎಸಿಪಿ ಕಚೇರಿಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಪರಿಣಾಮ ಕರ್ತವ್ಯದಲ್ಲಿದ್ದ ಎಸ್ಐ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಉತ್ತರ ಪ್ರದೇಶ, ದೆಹಲಿಯಲ್ಲಿ ವರುಣಾರ್ಭಟಕ್ಕೆ ಹಲವೆಡೆ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿದ್ದು, ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ.
ದೆಹಲಿಯ ಮಿಂಟೋ ರಸ್ತೆ, ಮೋತಿ ಬಾಗ್, ಕಂಟೋನ್ಮೆಂಟ್, ದೀನ್ ದಯಾಳ್ ಉಪಾಧ್ಯಾ ಮಾರ್ಗ ಸೇರಿದಂತೆ ಹಲವು ರಸ್ತೆಗಳು ನದಿಯಂತಾಗಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಏರ್ ಪೋರ್ಟ್ ರಸ್ತೆ ಜಲಾವೃತಗೊಂಡಿದ್ದು, ವಿಮಾನ ನಿಲ್ದಾಣದ ಆವರಣಕ್ಕೂ ನೀರು ನುಗ್ಗಿ ಅವಾಂತರಗಳು ಸೃಷ್ಟಿಯಾಗಿವೆ.