ಬೆಳಗಾವಿ: ದಿನದಿಂದ ದಿನಕ್ಕೆ ಮನುಷ್ಯ ಮನುಷತ್ವ, ಮಾನವೀಯತೆಯನ್ನೂ ಕಳೆದುಕೊಂಡು ವರ್ತಿಸುತ್ತಿರುವುದು ದುರ್ದೈವ. ಇಲ್ಲೋರ್ವ ತಂದೆ ತನ್ನ ಸ್ವಂತ ಮಗನನ್ನು ದೊಣ್ಣೆಯಿಂದ ಮನಬಂದತೆ ಹೊಡೆದು ಕೊಂದಿರುವ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
ಗಡಿ ಜಿಲ್ಲೆ ಬೆಳಗಾವಿಯ ಬೈಲಹೊಂಗಲ ತಾಲೂಕಿನ ಹಾರುಗೊಪ್ಪ ಗ್ರಾಮದಲ್ಲಿ ಇಂತದ್ದೊಂದು ಅಮಾನವೀಯ ಘಟನೆ ನಡೆದಿದ್ದು, ಕುಡಿದ ಮತ್ತಿನಲ್ಲಿ ತಂದೆಯೇ ತನ್ನ ಮೂರು ವರ್ಷದ ಮಗನನ್ನು ಒಲೆಯಲ್ಲಿದ್ದ ಸೌದೆಯಿಂದ ಮನಸೋ ಇಚ್ಚೆ ಥಳಿಸಿ ಸಾಯಿಸಿದ್ದಾನೆ. ಮಗುವಿನ ತಲೆ, ಕೈ-ಕಾಲು, ಬೆನ್ನು, ಎದೆಯ ಭಾಗದಲ್ಲಿ ಮಾರಣಾಂತಿಕ ಹಲ್ಲೆಯಾಗಿದ್ದು, ಅಪ್ಪ ಹೊಡೆದ ಹೊಡೆತಕ್ಕ ಬಾಲಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.
ಹೆತ್ತ ತಾಯಿಯ ಕಣ್ಮುಂದೆಯೇ ಪುಟ್ಟ ಬಾಲಕ ಪ್ರಾಣಬಿಟ್ಟಿದ್ದಾನೆ. ಕಾರ್ತಿಕ್ ಮುಕೇಶ್ ಮಾಜಿ ಮೃತ ಬಾಲಕ. ಬಿಹಾರ ಮೂಲದ ಕುಟುಂಬ ಹಾರುಗೊಪ್ಪ ಗ್ರಾಮದಲ್ಲಿ ವಾಸವಾಗಿತ್ತು. ಪತಿ-ಪತ್ನಿ ನಡುವೆ ಆಗಾಗ ಜಗಳವಾಗುತ್ತಿತ್ತು. ಇಂದು ಸ್ನೇಹಿತನ ಜೊತೆ ಕಂಠಪೂರ್ತಿ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಬಾಲಕನ ತಂದೆ ಬಳಿಕ ಪತ್ನಿ ಅಡುಗೆ ಮನೆಯಲ್ಲಿದ್ದಾಗ ಒಲೆಯಲ್ಲಿದ್ದ ಸೌದೆಯನ್ನು ತೆಗೆದುಕೊಂಡು ಬಂದು ಮೂರು ವರ್ಷದ ಮಗನಿಗೆ ಮನಬಂದಂತೆ ಹೊಡೆದಿದ್ದಾನೆ.
ಮಾರಣಾಂತಿಕ ಹಲ್ಲೆಯಿಂದಾಗಿ ರಕ್ತಸಿಕ್ತವಾಗಿ ಸ್ಥಳದಲ್ಲೇ ಕುಸಿದುಬಿದ್ದ ಮಗು ಅಲ್ಲಿಯೇ ಸಾವನ್ನಪ್ಪಿದೆ. ಘಟನಾ ಸ್ಥಳಕ್ಕೆ ಡಿ ವೈ ಎಸ್ ಪಿ ಡಾ ವೀರಯ್ಯ ಹಿರೇಮಠ, ನೇಸರಗಿ ಸಿಪಿಐ ಗಜಾನನ ನಾಯ್ಕ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದ್ದು, ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.