ತುಮಕೂರು: ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಬಗ್ಗೆ ಕಾಂಗ್ರೆಸ್ ನ ಕೆಲ ಅಯೋಗ್ಯರು ದೇಶ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಆಪರೇಷನ್ ಸಿಂಧೂರ್ ಯಶಸ್ವಿ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಬಿಜೆಪಿ ನಡೆಸಿದ ಬೃಹತ್ ತಿರಂಗಾ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿಜಯೇಂದ್ರ, ಪಹಲ್ಗಾಮ್ ನಲ್ಲಿ ಉಗ್ರರ ಅಟ್ಟಹಾಸಕ್ಕೆ 26 ಜನರು ಬಲಿಯಾಗಿದ್ದಾರೆ. ಇದರಿಂದಾಗಿ ಉಗ್ರ ಸಂಘಟನೆ, ಪಾಕಿಸ್ತಾನದ ವಿರುದ್ಧ ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿತ್ತು. ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲಾಗಿದೆ ಎಂದರು.
ಕ್ಷಪಣಿ ದಾಳಿ ಮೂಲಕ ಉಗ್ರಗಾಮಿಗಳನ್ನು ಹತ್ಯೆ ಮಾಡಲಾಗಿದೆ. ಭಾರತ, ಅಮೆರಿಕ ಹಿಟ್ ಲಿಸ್ಟ್ ನಲ್ಲಿದ್ದ ಉಗ್ರರನ್ನು ನಮ್ಮ ಸೈನಿಕರು ಹತ್ಯೆಗೈದಿದ್ದಾರೆ. ನಮ್ಮ ವೀರ ಯೋಧರಿಗೆ ನೈತಿಕ ಸ್ಥೈರ್ಯ ತುಂಬಲು ಈ ತಿರಂಗಾ ಯಾತ್ರೆ ಮಾಡುತ್ತುದ್ದೇವೆ. ಪ್ರಧಾನಿ ಮೋದಿಯವರು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ನೀರು, ರಕ್ತ ಒಟ್ಟಿಗೆ ಹರಿಯಲ್ಲ. ಪಾಕಿಸ್ತಾನವನ್ನು ಸರ್ವನಾಶ ಮಾಡಲು ಭಾರತ ಹೆದರಲ್ಲ ಎಂದು ಹೇಳಿದ್ದಾರೆ ಎಂದರು.
ಬಿ.ಕೆ.ಹರಿ ಪ್ರಸಾದ್ ಪಾಕಿಸ್ತಾನ ಶತ್ರುರಾಷ್ಟ್ರವಲ್ಲ, ಪಕ್ಕದ ರಾಷ್ಟ್ರ ಎಂದಿರುವ ಹೇಳಿಕೆ ಬಗ್ಗೆ ಕಿಡಿಕಾರಿದ ವಿಜಯೇಂದ್ರ, ಕಾಂಗ್ರೆಸ್ ಧುರೀಣರಿಗೆ ಪಾಕಿಸ್ತಾನದ ಮೇಲೆ ಪ್ರೀತಿ ಎಷ್ಟಿದೆ ಎಂದು ಹಲವುಬಾರಿ ಸಾಬೀತಾಗಿದೆ. ಸಿಎಂ ಸಿದ್ದರಾಮಯ್ಯ ಯುದ್ಧ ಬೇಡ ಶಾಂತಿ ಬೇಕು ಎಂದಿದ್ದರು. ದೇಶದ್ರೋಹಿಗಳಿಗೆ ಕಾಂಗ್ರೆಸ್ ಬೆಂಬಲ ನೀಡುವುದು ಮಹಾಪರಾಧ ಎಂದು ಗುಡುಗಿದರು. ಇನ್ನು ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಅವರ ಹೇಳಿಕೆಯಿಂದ ಯೋಧರಿಗೆ ಅಪಮಾನವಾಗಿದೆ. ಇಂತಹ ಸಂದರ್ಭದಲ್ಲಿ ದೇಶದ ಪರ ನಿಲ್ಲಬೇಕು ಹೊರತು ದೇಶ ವಿರೋಧಿ ಹೇಳಿಕೆ ನೀಡಬಾರದು. ಆದರೆ ಕಾಂಗ್ರೆಸ್ ನ ಕೆಲ ಅಯೋಗ್ಯರು ದೇಶವಿರೋಧಿ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.