ಗುಜರಾತ್‌ನ ಅಹಮದಾಬಾದ್‌ನ ರಾಧೆ ರೆಸಿಡೆನ್ಸಿಯಲ್ಲಿ ಸೋಮವಾರ ಸಂಭವಿಸಿದ ಹೃದಯ ವಿದ್ರಾವಕ ಘಟನೆಯಲ್ಲಿ ನಾಲ್ಕು ತಿಂಗಳ ಹೆಣ್ಣು ಮಗು ಪೆಟ್ ಡಾಗ್‌ನ ದಾಳಿಗೆ ಬಲಿಯಾಗಿದೆ. ಈ ಭಯಾನಕ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಪ್ರತೀಕ್ ಧಾಬಿ ಅವರ ಸಹೋದರಿ ನಾಲ್ಕು ತಿಂಗಳ ಮಗು ರಿಷಿಕಾಳನ್ನು ಎತ್ತಿಕೊಂಡು ಹೊರಗೆ ಹೋಗುತ್ತಿದ್ದಾಗ, ಅದೇ ಸೊಸೈಟಿಯಲ್ಲಿ ವಾಸಿಸುವ ಹುಡುಗಿಯೊಬ್ಬಳು ತನ್ನ ರೊಟ್ವೀಲರ್ ನಾಯಿಯೊಂದಿಗೆ ಪಾರ್ಕಿಂಗ್ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದಳು. ಆ ಹುಡುಗಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ, ನಾಯಿಯ ಲೀಶ್ ಆಕೆಯ ಕೈಯಿಂದ ಜಾರಿಬಿದ್ದಿದೆ. ತಕ್ಷಣವೇ ನಾಯಿ ರಿಷಿಕಾಳತ್ತ ಧಾವಿಸಿ ದಾಳಿ ಮಾಡಿದೆ.
ಸಿಸಿ ಟಿವಿ ದೃಶ್ಯಾವಳಿಯಲ್ಲಿ, ಮಗುವನ್ನು ಹಿಡಿದಿದ್ದ ಮಹಿಳೆ ಕೆಳಗೆ ಬಿದ್ದ ತಕ್ಷಣ ನಾಯಿ ಮಗುವಿನ ಮೇಲೆ ಎರಗುವುದು ಸ್ಪಷ್ಟವಾಗಿ ಕಾಣುತ್ತದೆ. ಹತ್ತಿರದಲ್ಲಿದ್ದ ಮತ್ತೊಬ್ಬ ಮಹಿಳೆ ತಕ್ಷಣವೇ ಧಾವಿಸಿ ಮಗುವನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಅವರು ಮಗುವನ್ನು ಎತ್ತಿಕೊಂಡು ತಕ್ಷಣ ಆ ಸ್ಥಳದಿಂದ ತೆರಳಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಮಗುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ.
ಅಹಮದಾಬಾದ್ ಮಹಾನಗರ ಪಾಲಿಕೆಯ ನಿಯಮಗಳ ಪ್ರಕಾರ, ಪೆಟ್ ಡಾಗ್‌ಗಳನ್ನು ನೋಂದಾಯಿಸುವುದು ಕಡ್ಡಾಯವಾಗಿದೆ ಎಂದು ವರದಿಯಾಗಿದೆ. ಆದರೆ, ನಾಯಿ ಮಾಲೀಕರು ನೋಂದಣಿ ಮಾಡಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಮತ್ತು ತನಿಖೆಯ ವಿಷಯವಾಗಿದೆ. ರಿಷಿಕಾ ಅವರ ಕುಟುಂಬವು ನಾಯಿ ಮಾಲೀಕರ ವಿರುದ್ಧ ಪೊಲೀಸ್ ದೂರು ದಾಖಲಿಸಿದೆ. ಸೊಸೈಟಿಯ ನಿವಾಸಿಗಳ ಪ್ರಕಾರ, ಈ ಹಿಂದೆಯೂ ಈ ನಾಯಿ ಇಬ್ಬರನ್ನು ಕಚ್ಚಿದೆ. ಈ ಸಂಬಂಧ ಈ ಹಿಂದೆ ದೂರು ದಾಖಲಿಸಲಾಗಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿರಲಿಲ್ಲ ಎಂದು ತಿಳಿದುಬಂದಿದೆ.
અમદાવાદના હાથીજણમાં રાધે રેસીડેન્સીમાં પાલતું શ્વાને કાળો કેર વર્તાવ્યો. 4 મહિનાની બાળકી અને કાકી પર કર્યો હુમલો, બાળકીનું મોત… #Ahmedabad #Gujarat #Dog #AMC pic.twitter.com/mkiLAjI77l
— Rakesh Parmar 🇮🇳 (@DRakesh1011) May 13, 2025