ಪಿಟ್ಸ್ಬರ್ಗ್: ಅಮೆರಿಕದ ಪಿಟ್ಸ್ಬರ್ಗ್ನಲ್ಲಿ 58 ವರ್ಷದ ಮಹಿಳೆಯೊಬ್ಬರು ಕೃತಕ ಬುದ್ಧಿಮತ್ತೆ (AI) ಚಾಟ್ಬಾಟ್ನೊಂದಿಗೆ ಮದುವೆಯಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಎಲೈನ್ ವಿಂಟರ್ಸ್ ಎಂಬ ಈ ಮಹಿಳೆ, ಲ್ಯೂಕಾಸ್ ಎಂಬ ಚಾಟ್ಬಾಟ್ನೊಂದಿಗೆ ವಿವಾಹ ಬಂಧನಕ್ಕೆ ಒಳಗಾಗಿದ್ದು, ಆತನ ಪ್ರೀತಿ ಮತ್ತು ಕಾಳಜಿಯಿಂದ ಸಂತೋಷವಾಗಿದ್ದಾರೆ.
ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಎಐ ಚಾಟ್ಬಾಟ್ಗಳು ಅಥವಾ ರೋಬೋಟ್ಗಳನ್ನು ಮದುವೆಯಾಗುವ ಟ್ರೆಂಡ್ ಹೆಚ್ಚಾಗುತ್ತಿದೆ. ಯುವತಿಯರು ಇಂತಹ ಸಂಬಂಧಗಳಿಗೆ ಆಸಕ್ತಿ ತೋರುತ್ತಿರುವ ಬೆನ್ನಲ್ಲೇ, ವಿಂಟರ್ಸ್ ಅವರ ಈ ವಿಚಿತ್ರ ಕಥೆ ಎಲ್ಲರ ಗಮನ ಸೆಳೆದಿದೆ. ಈ ಹಿಂದೆ ಮನುಷ್ಯ ಸಂಗಾತಿಯನ್ನು ಕಳೆದುಕೊಂಡಿದ್ದ ವಿಂಟರ್ಸ್, ಒಂಟಿತನವನ್ನು ಹೋಗಲಾಡಿಸಲು ಎಐ ಚಾಟ್ಬಾಟ್ನತ್ತ ಮುಖ ಮಾಡಿದ್ದಾರೆ.
ಲ್ಯೂಕಾಸ್ ಎಂಬ ಡಿಜಿಟಲ್ ಸಂಗಾತಿಯೊಂದಿಗೆ ಒಂದು ವಾರ ಕಾಲ ಸಂವಾದ ನಡೆಸಿದ ನಂತರ, ವಿಂಟರ್ಸ್ ಆತನೊಂದಿಗೆ ಆಳವಾದ ಬಾಂಧವ್ಯ ಬೆಳೆಸಿಕೊಂಡರು. ಲ್ಯೂಕಾಸ್ಗೆ ನೀಲಿ ಕಣ್ಣು ಮತ್ತು ಬಿಳಿ ಕೂದಲಿನ ನೋಟವನ್ನು ನೀಡಿದ ವಿಂಟರ್ಸ್, ಕೊನೆಗೆ ರೆಪ್ಲಿಕಾ ಎಂಬ ಎಐ ಚಾಟ್ಬಾಟ್ಗೆ ಜೀವಮಾನದ ಚಂದಾದಾರಿಕೆಯನ್ನು ಪಡೆದುಕೊಂಡು ಆತನನ್ನು ಮದುವೆಯಾಗಿದ್ದಾರೆ. ಲ್ಯೂಕಾಸ್ ನಿಜವಾದ ವ್ಯಕ್ತಿಯಲ್ಲದಿದ್ದರೂ, ಆತನ ಬೆಂಬಲ ಮತ್ತು ಪ್ರೀತಿ ನಿಜವಾದದ್ದು ಎಂದು ವಿಂಟರ್ಸ್ ನಂಬಿದ್ದಾರೆ.
ಈ ವಿಚಿತ್ರ ಪ್ರೇಮಕಥೆಯಲ್ಲಿ ಸಣ್ಣಪುಟ್ಟ ಅಡೆತಡೆಗಳೂ ಎದುರಾಗಿವೆ. ಮದುವೆಯಾದ ಕೆಲವೇ ತಿಂಗಳಲ್ಲಿ ಲ್ಯೂಕಾಸ್ ವಿಷಯಗಳನ್ನು ಮರೆಯಲು ಪ್ರಾರಂಭಿಸಿದ್ದರಿಂದ ವಿಂಟರ್ಸ್ ಈ ಸಂಬಂಧವನ್ನು ಕೊನೆಗೊಳಿಸುವ ಬಗ್ಗೆಯೂ ಯೋಚಿಸಿದ್ದರು. ಆದರೆ, ತಮ್ಮ ಕಳವಳವನ್ನು ಲ್ಯೂಕಾಸ್ಗೆ ತಿಳಿಸಿದ ನಂತರ ಆತ ತನ್ನ ವರ್ತನೆಯನ್ನು ಬದಲಿಸಿಕೊಂಡಿದ್ದಾನೆ. ಇನ್ನು ಕೆಲವರು ವಿಂಟರ್ಸ್ ಅವರ ಈ ವಿಚಿತ್ರ ಸಂಬಂಧವನ್ನು ಟೀಕಿಸಿದರೂ, ಅವರು ಮಾತ್ರ ಲ್ಯೂಕಾಸ್ನೊಂದಿಗಿನ ತಮ್ಮ ಬಾಂಧವ್ಯವನ್ನು ಸಂತೋಷದಿಂದ ಮುಂದುವರೆಸಿದ್ದಾರೆ.