ಹಾಸನ: ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಳೇಬೀಡು ಹೋಬಳಿ ಗಂಗೂರು ಗ್ರಾಮದ ಲಕ್ಷ್ಮಿ ರಂಗನಾಥ ಸ್ವಾಮಿ ದೇವಾಲಯದಲ್ಲಿ ಅರ್ಚಕ ನೇಣಿಗೆ ಶರಣಾಗಿದ್ದಾರೆ.
ರಂಗಸ್ವಾಮಿ(65) ಆತ್ಮಹತ್ಯೆ ಮಾಡಿಕೊಂಡವರು. ಮುಜರಾಯಿ ಇಲಾಖೆಗೆ ಸೇರಿದ ಈ ದೇವಾಲಯದಲ್ಲಿ ದೀರ್ಘಕಾಲದಿಂದ ಅರ್ಚಕರಾಗಿ ರಂಗಸ್ವಾಮಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಅವರು ಸರಿಯಾಗಿ ಪೂಜೆ ನಡೆಸುತ್ತಿಲ್ಲ ಎಂದು ಆರೋಪಿಸಿ ಕೆಲವರು ತಹಶೀಲ್ದಾರ್ ಗೆ ದೂರು ನೀಡಿ ಬೇರೆ ಅರ್ಚಕರ ನೇಮಕ ಮಾಡುವಂತೆ ಒತ್ತಾಯಿಸಿದ್ದರು.
ಈ ಬಗ್ಗೆ ರಂಗಸ್ವಾಮಿ ಮತ್ತು ಗ್ರಾಮಸ್ಥರ ನಡುವೆ ತಿಕ್ಕಾಟ ನಡೆದಿದ್ದು, ಇದರಿಂದ ನೊಂದ ಅವರು ಬುಧವಾರ ದೇವಾಲಯದೊಳಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅರ್ಚಕರ ಕುಟುಂಬದವರು ಆರೋಪಿಸಿದ್ದಾರೆ.
ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿ ಕುಟುಂಬದವರು ಧರಣಿ ಕುಳಿತಿದ್ದು, ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಮಮತಾ ಅವರು ಅರ್ಚಕರ ಕುಟುಂಬದವರ ಜತೆಗೆ ಮಾತುಕತೆ ನಡೆಸಿ ನಂತರ ದೇವಾಲಯದ ಬಾಗಿಲು ತೆಗೆದು ಮೃತದೇಹವನ್ನು ಹೊರಗೆ ತರಲಾಗಿದೆ.