ಬೆಳಗಾವಿ: ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಪಾಕಿಸ್ತಾನ ಭಯೋತ್ಪಾದಕರ ವಿರುದ್ಧ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಯಶಸ್ಸನ್ನು ಜಗತ್ತಿಗೆ ಸಾರಿದ ಕರ್ನಲ್ ಸೋಫಿಯಾ ಖುರೇಶಿ ಕರ್ನಾಟಕದ ಬೆಳಗಾವಿ ಜಿಲ್ಲೆಯ ಸೊಸೆ ಎಂಬುದು ಹೆಮ್ಮೆಯ ಸಂಗತಿ.
ಪಾಕಿಸ್ತಾನದ ನೆಲದಲ್ಲಿ ಉಗ್ರರ ನೆಲೆಗಳನ್ನು 21 ಕ್ಯಾಂಪ್, 9 ನೆಲೆಗಳನ್ನು ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಮೂಲಕ ಭಾರತೀಯ ಸೇನೆ ಧ್ವಂಸಗೊಳಿಸಿದ ಯಶಸ್ವಿ ಕಾರ್ಯಾಚರಣೆ ಬಗ್ಗೆ ಕರ್ನಲ್ ಸೋಫಿಯಾ ಖುರೇಶಿ ಮಾಹಿತಿ ನೀಡಿದ್ದಾರೆ. ಭಾರತೀಯ ಸೇನೆಯ ಯಶಸ್ವಿ ಕಾರ್ಯಾಚರಣೆ ಬಗ್ಗೆ ವಿವರಿಸಿದ್ದ ಸೋಫಿಯಾ ಖುರೇಷಿ ಬೆಳಗಾವಿಯ ಗೋಕಾಕ್ ತಾಲೂಕಿನ ಸೊಸೆ ಎಂಬುದು ತಿಳಿದುಬಂದಿದೆ.
ಸೋಫಿಯಾ ಅವರ ಪತಿ ತಾಜುದ್ದೀನ್ ಬಾಗೇವಾಡಿ ಅವರು ಬೆಲಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರು ಗ್ರಾಮದವರು. ತಾಜುದ್ದೀನ್ ಹಾಗೂ ಪತ್ನಿ ಸೋಫಿಯಾ ಇಬ್ಬರೂ ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸೋಫಿಯಾ ಹಾಗೂ ತಾಜುದ್ದೀನ್ 2015ರಲ್ಲಿ ಪ್ರೀತಿಸಿ ವಿವಾಹವಾಗಿದ್ದಾರೆ. ಕರ್ನಲ್ ಸೋಫಿಯಾ ಗುಜರಾತ್ ನ ಬರೋಡಾ ಮೂಲದವರು. ತಾಜುದ್ದೀನ್ ವಿವಾಹವಾಗಿ ಈಗ ಬೆಳಗಾವಿ ಸೊಸೆಯಾಗಿದ್ದಾರೆ. ಇದೀಗ ಬೆಳಗಾವಿಗೆ ಮಾತ್ರವಲ್ಲ ಇಡೀ ಕನ್ನಡ ನಾಡಿಗೆ ಹೆಮ್ಮೆಯಾಗಿದ್ದಾರೆ.
ಬಹುರಾಷ್ಟ್ರೀಯ ಸೇನಾ ತುಕಡಿಯನ್ನು ಮುನ್ನಡೆಸಿದ ಮೊದಲ ಭಾರತೀಯ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಯೂ ಸೋಫಿಯಾ ಮುಡಿಗೇರಿದೆ. ಸದ್ಯ ಸೋಫಿಯಾ ಜಮ್ಮುವಿನಲ್ಲಿ ಹಾಗೂ ಪತಿ ತಾಜುದ್ದೀನ್ ಝಾನ್ಸಿಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.