ಬೆಂಗಳೂರು: ಶಾಸಕ ಸ್ಥಾನಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ರಾಜೀನಾಮೆ ಸಲ್ಲಿಸದ ಕಾರಣ ಕೃಷಿ ಸಚಿವ ಶಿವಾನಂದ ಪಾಟೀಲ್ ಅವರು ಸಲ್ಲಿಸಿದ ಷರತ್ತುಬದ್ಧ ರಾಜೀನಾಮೆಯನ್ನು ಅಂಗೀಕರಿಸಿಲ್ಲ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ತಿಳಿಸಿದ್ದಾರೆ.
ಶಿವಾನಂದ ಪಾಟೀಲ್ ಅವರು ಆರು ಬಾರಿ ವಿಧಾನಸಭೆ ಶಾಸಕರಾಗಿ ಸಮಾಜದ ಪ್ರತಿಯೊಬ್ಬರಿಗೂ ಬೇಕಾದ ಜನಾನುರಾಗಿಯಾಗಿದ್ದಾರೆ. ಯಾವುದೇ ಜಾತಿ ಅಥವಾ ಧರ್ಮಾಧಾರಿತ ಗಲಭೆಗಳಿಗೆ ಅವಕಾಶ ನೀಡದ ಹಿರಿಯ ನಾಯಕರಾಗಿದ್ದು, ರಾಜ್ಯವೇ ಹೆಮ್ಮೆ ಪಡುವ ನಾಯಕ ಎಂದು ಬಣ್ಣಿಸಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದಲ್ಲಿ ಅವರ ವಿರುದ್ಧ ಉಪಚುನಾವಣೆಯಲ್ಲಿ ಸ್ಪರ್ಧಿಸಲು ತಾವು ಸಲ್ಲಿಸಿರುವ ಷರತ್ತುಬದ್ಧ ರಾಜೀನಾಮೆ ಪತ್ರವನ್ನು ಅಂಗೀಕರಿಸಬೇಕು ಎಂದು ಶಿವಾನಂದ ಪಾಟೀಲರು ಹೇಳಿದ್ದಾರೆ. ಆದರೆ, ಯತ್ನಾಳ್ ಅವರು ಇದುವರೆಗೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ವೈಯಕ್ತಿಕವಾಗಿಯೂ ನನ್ನನ್ನು ಭೇಟಿ ಮಾಡಿಲ್ಲ. ವಿಧಾನಸಭೆ ಸಚಿವಾಲಯವು ಯತ್ನಾಳ್ ಅವರ ರಾಜೀನಾಮೆಯನ್ನು ಸ್ವೀಕರಿಸಿಲ್ಲ ಎಂದು ಶಿವಾನಂದ ಪಾಟೀಲ್ ಅವರಿಗೆ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿಧಾನಸಭೆ ನಿಯಮಗಳ ಪ್ರಕಾರ ಶಿವಾನಂದ ಪಾಟೀಲ್ ಅವರ ಷರತ್ತುಬದ್ಧ ರಾಜೀನಾಮೆಯನ್ನು ಅಂಗೀಕರಿಸಲು ಸಾಧ್ಯವಿಲ್ಲ ಎಂದು ಅವರಿಗೆ ಮನವರಿಕೆ ಮಾಡಲಾಗಿದೆ.
ರಾಜ್ಯಕ್ಕೆ ಅನುಭವಿ ಮತ್ತು ಹಿರಿಯರಾದ ಶಿವಾನಂದ ಪಾಟೀಲ್ ಅವರ ಅಗತ್ಯವಿದೆ ಎಂದು ಯು.ಟಿ. ಖಾದರ್ ತಿಳಿಸಿದ್ದಾರೆ.
ಇತ್ತೀಚೆಗೆ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಶಿವಾನಂದ ಪಾಟೀಲರಿಗೆ ಸವಾಲು ಹಾಕಿದ್ದರು, ರಾಜಕೀಯಕ್ಕಾಗಿ ಪಾಟೀಲ ಎಂದು ಉಪನಾಮ ಸೇರಿಸಿಕೊಂಡಿದ್ದಾರೆ. ಅಪ್ಪನಿಗೆ ಹುಟ್ಟಿದವನೇ ಆದರೆ ಶುಕ್ರವಾರದೊಳಗೆ ರಾಜೀನಾಮೆ ನೀಡಿ ಚುನಾವಣೆಯಲ್ಲಿ ನನ್ನ ಎದುರು ಸ್ಪರ್ಧಿಸಲಿ ಎಂದು ಹೇಳಿದ್ದರು. ಈ ಸವಾಲು ಸ್ವೀಕರಿಸಿದ್ದ ಶಿವಾನಂದ ಪಾಟೀಲ ಶುಕ್ರವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪಕ್ಷಕ್ಕೂ ಇದಕ್ಕೂ ಸಂಬಂಧವಿಲ್ಲ. ಇದು ವೈಯಕ್ತಿಕ ತೀರ್ಮಾನವಾಗಿದ್ದು, ಯತ್ನಾಳ್ ಕೂಡ ರಾಜೀನಾಮೆ ನೀಡಿ ನನ್ನ ವಿರುದ್ಧ ಚುನಾವಣೆ ಎದುರಿಸಲಿ ಎಂದು ಶಿವಾನಂದ ಪಾಟೀಲ್ ಸವಾಲು ಹಾಕಿದ್ದರು.