ಬೆಂಗಳೂರು: ಬೆಂಗಳೂರು ಮಹಾನಗರದಲ್ಲಿ ಅನಧಿಕೃತ ಜಾಹೀರಾತು ತಡೆಗೆ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಫ್ಲೆಕ್ಸ್ ಮುದ್ರಣಕ್ಕೆ ಇನ್ನು ಬಿಬಿಎಂಪಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
ವಲಯವಾರು ಅನಧಿಕೃತ ಜಾಹೀರಾತು ತಡೆಗೆ ಬಿಬಿಎಂಪಿ ಜಾಹಿರಾತು ನಿಯಂತ್ರಣ ತಂಡ ರಚಿಸುವುದು, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಚೇರಿಯಲ್ಲಿ ನಿಯಂತ್ರಣ ಕೊಠಡಿ ಆರಂಭ ಸೇರಿ ಬಿಪಿಎಂಪಿ ವತಿಯಿಂದ ಅನಧಿಕೃತ ಜಾಹೀರಾತು ತೆರವುಗೊಳಿಸಲು ಪರಿಷ್ಕೃತ ಮಾರ್ಗಸೂಚಿ ರಚಿಸಿ ಮುಖ್ಯ ಆಯುಕ್ತರು ಆದೇಶಿಸಿದ್ದಾರೆ.
ಬಿಬಿಎಂಪಿ ಮುಖ್ಯ ಆಯುಕ್ತರ ಲಿಖಿತ ಅನುಮೋದನೆ ಇಲ್ಲದೆ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡುವಂತಿಲ್ಲ. ಅನುಮೋದನೆ ಪಡೆಯದೆ ಜಾಹೀರಾತು ಫ್ಲೆಕ್ಸ್ ಮುದ್ರಣ ಮಾಡುವಂತಿಲ್ಲ ಎಂದು ಆದೇಶಿಸಲಾಗಿದೆ.
ಅನಧಿಕೃತ ಜಾಹೀರಾತು ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆಯುಕ್ತರು ಗುರುವಾರ ಮಾರ್ಗಸೂಚಿ ರಚಿಸಿದ್ದಾರೆ. ಅನಧಿಕೃತ ಜಾಹೀರಾತು ತಡೆಗೆ ಮಾರ್ಷಲ್, ಕಿರಿಯ ಇಂಜಿನಿಯರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳ ನೇತೃತ್ವದಲ್ಲಿ ಬಿಬಿಎಂಪಿ ಜಾಹೀರಾತು ನಿಯಂತ್ರಣ ತಂಡವನ್ನು ವಲಯ ಆಯುಕ್ತರು ರಚಿಸತಕ್ಕದ್ದು. ಅನಧಿಕೃತವಾಗಿ ಜಾಹೀರಾತು ಅಳವಡಿಸಿದ ಮಾಹಿತಿ ದೊರೆತ ಕೂಡಲೆ ತೆರವುಗೊಳಿಸಬೇಕು. ತೆರವುಗೊಳಿಸಿದ ವೆಚ್ಚವನ್ನು ಅಳವಡಿಸಿದವರಿಂದಲೇ ವಸೂಲಿ ಮಾಡಬೇಕು ಎಂದು ಹೇಳಲಾಗಿದೆ.
ಅನಧಿಕೃತ ಜಾಹೀರಾತು ಅಳವಡಿಸಿದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು, ದಂಡ ವಿಧಿಸಲು ಮೇಲ್ವಿಚಾರಣೆ ಮಾಡುವ ಅಧಿಕಾರವನ್ನು ಬಿಬಿಎಂಪಿ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗೆ ನೀಡಲಾಗಿದೆ.