ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಮಂಗಳವಾರ ನಡೆದ ಉಗ್ರರ ದಾಳಿಯಲ್ಲಿ ಬೆಂಗಳೂರು ನಿವಾಸಿ ಭರತ್ ಭೂಷಣ್ ಮೃತಪಟ್ಟಿದ್ದಾರೆ.
ಹಾವೇರಿ ಜಿಲ್ಲೆ ರಾಣೇಬೆನ್ನೂರು ಮೂಲದ ಭರತ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ಸುಜಾತಾ ಮತ್ತು ಮೂರು ವರ್ಷದ ಮಗುವಿನ ಜೊತೆಗೆ ಮತ್ತಿಕೆರೆ ಜೆಪಿ ಪಾರ್ಕ್ ನಲ್ಲಿ ನೆಲೆಸಿದ್ದಾರೆ.
ಪತ್ನಿ, ಪುತ್ರನೊಂದಿಗೆ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ ಅವರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಅವರ ಕುಟುಂಬಕ್ಕೆ ಸಂಸದ ತೇಜಸ್ವಿ ಸೂರ್ಯ ನೆರವು ನೀಡಿದ್ದಾರೆ. ಅಧಿಕೃತ ಕಾರ್ಯದ ನಿಮಿತ್ತ ಕಾಶ್ಮೀರ ಪ್ರವಾಸ ಕೈಗೊಂಡಿದ್ದ ತೇಜಸ್ವಿ ಸೂರ್ಯ ಉಗ್ರರ ದಾಳಿಯ ಸುದ್ದಿ ತಿಳಿದ ತಕ್ಷಣ ಸ್ಥಳೀಯ ಅಧಿಕಾರಿಗಳ ಜೊತೆ ಸಂಪರ್ಕ ಸಾಧಿಸಿ ಭರತ್ ಅವರ ಪತ್ನಿ ಸುಜಾತಾ ಅವರೊಂದಿಗೆ ಮಾತನಾಡಿದ್ದಾರೆ. ಸುಜಾತಾ ಮತ್ತು ಮೂರು ವರ್ಷದ ಪುತ್ರನಿಗೆ ಅನಂತನಾಗ್ ನಲ್ಲಿ ಸುರಕ್ಷಿತವಾಗಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದಾರೆ.

