ಬೆಂಗಳೂರು: ಬೆಂಗಳೂರಿನಲ್ಲಿ ನಡು ರಸ್ತೆಯಲ್ಲಿ ವಿಂಗ್ ಕಮಾಂಡರ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಬೆಂಗಳೂರಿನ ಏರ್ ಪೋರ್ಟ್ ರಸ್ತೆಯಲ್ಲಿ ಪತ್ನಿ ಜೊತೆ ಕಾರಿನಲ್ಲಿ ತೆರಳುತ್ತಿದ್ದ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಮೇಲೆ ಬೈಕ್ ಸವಾರನೊಬ್ಬ ಮನಬಂದಂತೆ ಹಲ್ಲೆ ನಡೆಸಿದ್ದ. ಕಾರಿನ ಮೇಲೆ ಡಿಆರ್ ಡಿಒ ಸ್ಟಿಕ್ಕರ್ ಇರುವುದನ್ನು ಕಂಡು ಇನ್ನಷ್ಟು ಜನರನ್ನು ಸೇರಿ ಅವರೊಂದಿಗೂ ಹಲ್ಲೆ ಮಾಡಿದ್ದ. ವಿಂಗ್ ಕಮಾಂಡರ್ ಶಿಲಾದಿತ್ಯ ತಾನೊಬ್ಬ ಯೋಧ ಎಂದು ಹೇಳಿದರೂ ಕೇಳಿಲ್ಲ. ಸೇರಿದ್ದ ಜನರೂ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ವಿಂಗ್ ಕಮಾಂಡರ್ ಹಣೆ, ಮೂಗಿನ ಭಾಗದಲ್ಲಿ ಗಂಭೀರವಾದ ಗಾಯಗಳಾಗಿದ್ದು ರಕ್ತ ಸೋರುತ್ತಿದ್ದರೂ ತಮ್ಮ ಮೇಲೆ ಹಲ್ಲೆ ನಡೆದಿರುವ ಬಗ್ಗೆ ವಿಡಿಯೋ ಮಾಡಿ ತಮ್ಮ ನೋವು ಹಂಚಿಕೊಂಡಿದ್ದಾರೆ.
ವಿಂಗ್ ಕಮಾಂಡರ್ ಮೇಲಿನ ಹಲ್ಲೆ ಪ್ರಕರಣದ ವಿಡಿಯೋ ವೈರಲ್ ಆಗುತ್ತಿದ್ದಂತೆ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಂಗ್ ಕಮಾಂಡರ್ ಶಿಲಾದಿತ್ಯ ಮೇಲೆ ಇಬ್ಬರು ಅಪರಿಚಿತರಿಂದ ಹಲ್ಲೆ ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಎಫ್ಐಆರ್ ದಾಖಲಾಗಿದೆ.