ಭೋಪಾಲ್: ಕಮಿಷನ್ ಹೆಚ್ಚಳ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಡುಗೆ ಅನಿಲ ವಿತರಕರ ಸಂಘ ಮುಷ್ಕರ ನಡೆಸಲು ಮುಂದಾಗಿದೆ.
ಮೂರು ತಿಂಗಳಲ್ಲಿ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳದಿದ್ದರೆ ದೇಶಾದ್ಯಂತ ಅನಿರ್ದಿಷ್ಟಾವಧಿವರೆಗೆ ಮುಷ್ಕರ ನಡೆಸುವುದಾಗಿ ಅಡುಗೆ ಅನಿಲ ವಿತರಕರ ಸಂಘದ ರಾಷ್ಟ್ರೀಯ ಸಮಾವೇಶದಲ್ಲಿ ನಿರ್ಣಯ ಅಂಗೀಕರಿಸಲಾಗಿದೆ.
ಶನಿವಾರ ಭೋಪಾಲ್ ನಲ್ಲಿ ನಡೆದ ಸಂಘದ ರಾಷ್ಟ್ರೀಯ ಸಮಾವೇಶದಲ್ಲಿ ಈ ಕುರಿತು ನಿರ್ಣಯ ಕೈಗೊಂಡಿರುವುದಾಗಿ ಸಂಘದ ಅಧ್ಯಕ್ಷ ಬಿ.ಎಸ್. ಶರ್ಮಾ ತಿಳಿಸಿದ್ದಾರೆ.
ವಿವಿಧ ರಾಜ್ಯ ಘಟಕಗಳು ತಮ್ಮ ಬೇಡಿಕೆಯನ್ನು ಮಂಡಿಸಿವೆ. ಇದರೊಂದಿಗೆ ಇತರೆ ಬೇಡಿಕೆಗಳನ್ನು ಸೇರಿಸಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಗಿದೆ. ಈಗ ನೀಡುತ್ತಿರುವ ಕಮಿಷನ್ ತೀರಾ ಕಡಿಮೆಯಾಗಿದ್ದು, ಕಾರ್ಯಾಚರಣೆ ವೆಚ್ಚಕ್ಕೂ ಸಾಲುತ್ತಿಲ್ಲ. ಕನಿಷ್ಠ 150 ರೂಪಾಯಿಗೆ ಕಮಿಷನ್ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಎಲ್ಪಿಜಿ ಪೂರೈಕೆಯು ಸದಾ ಬೇಡಿಕೆಯ ಪ್ರಮಾಣ ಆಧರಿಸಿರುತ್ತದೆ. ಆದರೆ, ಬೇಡಿಕೆಗಿಂತ ಹೆಚ್ಚಿನ ಪ್ರಮಾಣದ ಗೃಹೇತರ ಬಳಕೆಯ ಸಿಲಿಂಡರ್ ಗಳನ್ನು ತೈಲ ಕಂಪನಿ ಗಳು ಒತ್ತಾಯವಾಗಿ ನೀಡುತ್ತಿದ್ದು, ಇದನ್ನು ತಕ್ಷಣ ನಿಲ್ಲಿಸಬೇಕು. ಉಜ್ವಲ ಯೋಜನೆ ಸಿಲಿಂಡರ್ ವಿತರಣೆಯಲ್ಲಿಯೂ ಸಮಸ್ಯೆ ಇದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.