ಹಿರಿಯ ನಟಿ ಮತ್ತು ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ ಅವರು ಇತ್ತೀಚೆಗೆ ಅಕ್ಷಯ್ ಕುಮಾರ್ ಅವರ 2017ರ ಸೂಪರ್ ಹಿಟ್ ಚಿತ್ರ ‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’ ಸಿನಿಮಾದ ಹೆಸರನ್ನು ವ್ಯಂಗ್ಯವಾಡಿದ್ದರು. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜಯಾ ಬಚ್ಚನ್, ಆ ಸಿನಿಮಾ ಒಂದು ‘ಫ್ಲಾಪ್’ ಎಂದು ಹೇಳಿದ್ದಲ್ಲದೆ, ಆ ಹೆಸರಿನ ಸಿನಿಮಾ ನೋಡಲು ಇಷ್ಟಪಡುವುದಿಲ್ಲ ಎಂದಿದ್ದರು.
ಜಯಾ ಬಚ್ಚನ್ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅನೇಕ ನೆಟ್ಟಿಗರು ‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’ ಭಾರತದಲ್ಲಿನ ಶೌಚಾಲಯದ ಕೊರತೆ ಮತ್ತು ಬಯಲು ಶೌಚದ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸಿದ ಚಿತ್ರ ಎಂದು ಜಯಾ ಬಚ್ಚನ್‌ಗೆ ನೆನಪಿಸಿದ್ದರು. ಇದೀಗ ಈ ಕುರಿತು ಅಕ್ಷಯ್ ಕುಮಾರ್ ಮೌನ ಮುರಿದಿದ್ದಾರೆ.
ತಮ್ಮ ಮುಂಬರುವ ಚಿತ್ರ ‘ಕೇಸರಿ ಚಾಪ್ಟರ್ 2’ರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅಕ್ಷಯ್ ಕುಮಾರ್, ತಮ್ಮದೇ ಚಿತ್ರರಂಗದ ಸಹ ಕಲಾವಿದರು ತಮ್ಮ ಸಿನಿಮಾಗಳನ್ನು ಟೀಕಿಸಿದಾಗ ನೋವಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಕ್ಷಯ್ ಕುಮಾರ್, “ಟೀಕಿಸುವುದು, ನನ್ನ ಸಿನಿಮಾಗಳನ್ನು ಯಾರೂ ಟೀಕಿಸಿದ್ದಾರೆಂದು ನನಗೆ ಅನಿಸುವುದಿಲ್ಲ. ನಾನು ‘ಪ್ಯಾಡ್ ಮ್ಯಾನ್’ ರೀತಿಯ ಸಿನಿಮಾಗಳನ್ನು ಮಾಡಿದ್ದೇನೆ. ‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’, ‘ಏರ್‌ಲಿಫ್ಟ್’, ‘ಕೇಸರಿ 1’, ಈಗ ‘ಕೇಸರಿ 2’ ಬರುತ್ತಿದೆ. ಇಂತಹ ಅನೇಕ ಸಿನಿಮಾಗಳಿವೆ. ಇಂತಹ ಸಿನಿಮಾಗಳನ್ನು ಟೀಕಿಸುವವರು ಯಾರಾದರೂ ಇದ್ದರೆ ಅವರು ಖಂಡಿತಾ ಮೂರ್ಖರಾಗಿರುತ್ತಾರೆ. ನಾನು ಈ ಸಿನಿಮಾಗಳನ್ನು ನನ್ನ ಹೃದಯದಿಂದ ಮಾಡಿದ್ದೇನೆ. ಪ್ರತಿಯೊಂದು ಸಿನಿಮಾವೂ ಜನರಿಗೆ ಬಹಳಷ್ಟು ವಿಷಯಗಳನ್ನು ತಿಳಿಸುತ್ತದೆ, ಅರ್ಥ ಮಾಡಿಸುತ್ತದೆ. ಹಾಗಾಗಿ ಯಾರೂ ಟೀಕಿಸಿದ್ದಾರೆಂದು ನನಗೆ ಅನಿಸುವುದಿಲ್ಲ” ಎಂದರು.
ಜಯಾ ಬಚ್ಚನ್ ಅವರು ‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’ ಸಿನಿಮಾದ ಹೆಸರಿನಿಂದಾಗಿ ಅದನ್ನು ನೋಡಲು ಇಷ್ಟವಿಲ್ಲ ಎಂದು ಹೇಳಿರುವ ಕುರಿತು ಕೇಳಿದ ಪ್ರಶ್ನೆಗೆ ಅಕ್ಷಯ್ ಕುಮಾರ್ ಗೌರವಯುತವಾಗಿ ಉತ್ತರಿಸಿದ್ದಾರೆ. “ಅವರು ಹಾಗೆ ಹೇಳಿದ್ದಾರೆಂದರೆ ಅದು ನಿಜವಿರಬಹುದು, ನನಗೆ ಗೊತ್ತಿಲ್ಲ. ಒಂದು ವೇಳೆ ‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’ ಅಂತಹ ಸಿನಿಮಾ ಮಾಡಿ ನಾನು ಏನಾದರೂ ತಪ್ಪು ಮಾಡಿದ್ದರೆ, ಅವರು ಹೇಳುತ್ತಿರುವುದು ಸರಿಯಾಗಿರಬಹುದು” ಎಂದು ಅಕ್ಷಯ್ ಕುಮಾರ್ ಹೇಳಿದರು.