ಬ್ಯಾಚುಲರ್‌ಗಳು ಮತ್ತು ಅಡುಗೆ ಮಾಡಲು ಸೋಮಾರಿತನ ಪಡುವವರಿಗೆ ನೆಸ್ಲೆ ಮ್ಯಾಗಿ ಒಂದು ರೀತಿಯ ವರದಾನ ಎಂದರೆ ತಪ್ಪಾಗಲಾರದು. ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದಾದ ಈ ನೂಡಲ್ಸ್ ಹೊಟ್ಟೆ ತುಂಬಿಸುವುದರ ಜೊತೆಗೆ ತೃಪ್ತಿಯನ್ನೂ ನೀಡುತ್ತದೆ. ಆದರೆ, ಜಾಹೀರಾತುಗಳಲ್ಲಿ ತೋರಿಸುವಂತೆ ನಿಜವಾಗಿಯೂ ಕೇವಲ ಎರಡು ನಿಮಿಷಗಳಲ್ಲಿ ಮ್ಯಾಗಿಯನ್ನು ಬೇಯಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರ ಹುಡುಕ ಹೊರಟ ಆಹಾರ ವ್ಲಾಗರ್ ಒಬ್ಬರ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವಿಡಿಯೊದ ಆರಂಭದಲ್ಲಿ, ಆ ಯುವಕ ತಾನು ಕೇವಲ ಎರಡು ನಿಮಿಷಗಳಲ್ಲಿ ಬೇಯಿಸಿದ ಮ್ಯಾಗಿಯನ್ನು ತಿನ್ನುತ್ತೇನೆ ಎಂದು ಹೇಳಿಕೊಳ್ಳುತ್ತಾನೆ. ತಕ್ಷಣವೇ ಟೈಮರ್ ಆನ್ ಮಾಡಲಾಗುತ್ತದೆ. ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಅದಕ್ಕೆ ನೀರು ಹಾಕಲಾಗುತ್ತದೆ. ನೀರು ಕುದಿಯುವ ಮುನ್ನವೇ ವ್ಲಾಗರ್ ಮ್ಯಾಗಿ ಮತ್ತು ಮಸಾಲೆಯನ್ನು ಸೇರಿಸುತ್ತಾನೆ. “ನಾನು ಯಾವಾಗಲೂ ಮಸಾಲೆಗಳನ್ನು ಮೊದಲು ಸೇರಿಸುತ್ತೇನೆ ಏಕೆಂದರೆ ಮ್ಯಾಗಿ ಬೇಯಿಸಲು ಅದು ಸರಿಯಾದ ಮಾರ್ಗ” ಎಂದು ಆತ ತನ್ನದೇ ಆದ ಅಡುಗೆ ವಿಧಾನವನ್ನು ಸಮರ್ಥಿಸಿಕೊಳ್ಳುತ್ತಾನೆ. ನೀರು ಸರಿಯಾಗಿ ಕುದಿಯದಿದ್ದರೂ ಆತ ಅಡುಗೆಯನ್ನು ಮುಂದುವರೆಸುತ್ತಾನೆ.
ತಾನು ಹೇಳಿದಂತೆ ನಿಖರವಾಗಿ ಎರಡು ನಿಮಿಷಗಳಲ್ಲಿ ವ್ಲಾಗರ್ ಅಡುಗೆಯನ್ನು ನಿಲ್ಲಿಸುತ್ತಾನೆ. ನಂತರ ಆತ ಸರಿಯಾಗಿ ಬೇಯದ, ಹಸಿ ಮ್ಯಾಗಿಯನ್ನು ತೆಗೆದು ತಿನ್ನುತ್ತಾನೆ. ತಿಂದ ಕೆಲವೇ ಕ್ಷಣಗಳಲ್ಲಿ ಅವನ ಮುಖದಲ್ಲಿ ಅಸಮಾಧಾನ ಎದ್ದು ಕಾಣುತ್ತದೆ. “ಏಕೆ ಗೊತ್ತಿಲ್ಲ, ನನಗೆ ಹೊಟ್ಟೆ ನೋವು ಬರುತ್ತಿದೆ” ಎಂದು ಆತ ತನ್ನ ಸಂಕಟವನ್ನು ವಿಡಿಯೊದಲ್ಲಿ ತೋಡಿಕೊಳ್ಳುತ್ತಾನೆ. ಈ ವಿಡಿಯೊ ಇನ್‌ಸ್ಟಾಗ್ರಾಮ್‌ನಲ್ಲಿ ಕಾಣಿಸಿಕೊಂಡಿದ್ದು, ಸಾಕಷ್ಟು ವೀಕ್ಷಣೆಗಳನ್ನು ಮತ್ತು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ.
ಈ ವಿಡಿಯೊಗೆ ಪ್ರತಿಕ್ರಿಯಿಸಿರುವ ಅನೇಕ ನೆಟ್ಟಿಗರು ಮ್ಯಾಗಿಯನ್ನು ಚೆನ್ನಾಗಿ ಬೇಯಿಸದೆ ಎಂದಿಗೂ ತಿನ್ನಬಾರದು ಎಂದು ಸಲಹೆ ನೀಡಿದ್ದಾರೆ. ಸರಿಯಾಗಿ ಬೇಯಿಸದ ಮ್ಯಾಗಿಯನ್ನು ಸೇವಿಸುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.