ಬೆಂಗಳೂರು: ಬೇಸಿಗೆ ರಜೆ ಹಿನ್ನೆಲೆಯಲ್ಲಿ ಊರುಗಳಿಗೆ, ಪ್ರವಾಸಕ್ಕೆ ತೆರಳುವ ಬೆಂಗಳೂರು ನಗರ ನಿವಾಸಿಗಳು ಮನೆ ಭದ್ರತೆ ಬಗ್ಗೆ ಎಚ್ಚರ ವಹಿಸಬೇಕು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಇತ್ತೀಚೆಗೆ ಕಳ್ಳತನ, ಅಪರಾಧ ಕೃತ್ಯಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯ ಎಂದು ಸಲಹೆ ನೀಡಿದರು.
ದೀರ್ಘ ಕಾಲದ ಪ್ರವಾಸಕ್ಕೆ ತೆರಳುವಾಗ ಮನೆಯಲ್ಲಿ ಬೆಲೆಬಾಳುವ ವಸ್ತುಗಳನ್ನು ಇಡಬೇಡಿ. ಅವುಗಳನ್ನು ಬ್ಯಾಂಕ್ ಗಳಲ್ಲಿ ಅಥವಾ ಲಾಕರ್ ಗಳಲ್ಲಿ ಇಡುವುದು ಸೂಕ್ತ.
ಹೆಚ್ಚು ದಿನ ಪ್ರವಾಸಕ್ಕೆ ಹೋಗುವುದಿದ್ದರೆ ಪೊಲೀಸರಿಗೆ ಮಾಹಿತಿ ನೀಡಿ. ಮನೆಗೆ ಗುಣಮಟ್ಟದ ಬೀಗ ಅಳವಡಿಕೆ ಮಾಡಿ. ಬೀಗದ ಕೀಯನ್ನು ಮನೆ ಪಕ್ಕ ಎಲ್ಲೋ ಇಡುವ ಅಭ್ಯಾಸ ಬೇಡ. ಒಂದಕ್ಕಿಂತ ಹೆಚ್ಚುದಿನ ಮನೆಗೆ ಬೀಗ ಹಾಕಿ ಪ್ರವಾಸಕ್ಕೆ ಹೋಗುವುದಾದರೆ ಪೊಲೀಸರಿಗೆ ಮಾಹಿತಿ ನೀಡಿ ತೆರಳಿ. ಇಂತಹ ಸಂದರ್ಭದಲ್ಲಿ ಆ ಪ್ರದೇಶದಲ್ಲಿ ಗಸ್ತು ತಿರುಗುವ ಪೊಲೀಸರಿಗೆ ಸುಲಭವಾಗುತ್ತದೆ.
ಇನ್ನು ಮನೆ ಕೆಲಸದವರ ನೇಮಕ ಮಾಡಿಕೊಳ್ಳುವಾಗ ಎಚ್ಚರವಿರಲಿ. ಮನೆಗಳಲ್ಲಿ ಎಲ್ಲೆಂದರಲ್ಲಿ ಕೆಲ್ಸದವರು ಓದಾಡಲು ಬಿಡಬೇಡಿ. ಬೆಲೆ ಬಾಳುವ ವಸ್ತುಗಳನ್ನು ಅವರಿಗೆ ಕಾಣುವಂತೆ ಇಡುವುದು ಸರಿಯಲ್ಲ ಎಂದು ಸಲಹೆ ನೀಡಿದ್ದಾರೆ.