ದುಬೈ, ವಿಶ್ವದ ಪ್ರಮುಖ ನಗರಗಳಲ್ಲಿ ಒಂದು. ಇಲ್ಲಿನ ಸ್ವಚ್ಛತೆಯ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತಿರುತ್ತವೆ. ಇತ್ತೀಚೆಗೆ ಓರ್ವ ವ್ಯಕ್ತಿ ತನ್ನ ಬಿಳಿ ಕಾಲ್ಚೀಲಗಳೊಂದಿಗೆ ದುಬೈನ ರಸ್ತೆಗಳಲ್ಲಿ ನಡೆದು ಸ್ವಚ್ಛತೆಯನ್ನು ಪರೀಕ್ಷಿಸುವ ಒಂದು ವಿಚಿತ್ರ ಸಾಹಸಕ್ಕೆ ಕೈ ಹಾಕಿದ್ದಾರೆ. ಅವರ ಈ ಪ್ರಯೋಗದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
‘ಜಿಂಬೋ ಎಚ್’ ಎಂಬ ಟಿಕ್‌ಟಾಕ್ ಬಳಕೆದಾರರು ಒಂದು ಜೋಡಿ ಹೊಚ್ಚ ಹೊಸ ಬಿಳಿ ಕಾಲ್ಚೀಲಗಳನ್ನು ಧರಿಸಿ ದುಬೈನ ಪ್ರಮುಖ ಸ್ಥಳಗಳಾದ ಮಾಲ್‌ಗಳು, ಪ್ರವಾಸಿ ತಾಣಗಳು ಮತ್ತು ಬೀದಿಗಳಲ್ಲಿ ನಡೆದಿದ್ದಾರೆ. ಬುರ್ಜ್ ಖಲೀಫಾದ ಬಳಿ ಮೆಟ್ಟಿಲುಗಳ ಮೇಲೆ ಕುಳಿತು ಕಾಲ್ಚೀಲಗಳನ್ನು ಹಾಕಿಕೊಳ್ಳುವ ದೃಶ್ಯದೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ. ನಂತರ ಅವರು ಕಾಲ್ಚೀಲಗಳೊಂದಿಗೆ ನಡೆದಾಡುತ್ತಾ, ನೆಲಹಾಸುಗಳು, ಪಾದಚಾರಿ ಮಾರ್ಗಗಳು ಎಲ್ಲೆಂದರಲ್ಲಿ ಹೆಜ್ಜೆ ಹಾಕಿದ್ದಾರೆ. ತಾವು ಪ್ರತಿ ಹೆಜ್ಜೆ ಇಟ್ಟಾಗಲೂ ದುಬೈ ನಿಜವಾಗಿಯೂ ಎಷ್ಟು ಸ್ವಚ್ಛವಾಗಿದೆ ಎಂದು ಪರೀಕ್ಷಿಸುವ ಪ್ರಯತ್ನ ಅವರದ್ದಾಗಿತ್ತು.
ಆಶ್ಚರ್ಯವೆಂದರೆ, ಆ ವ್ಯಕ್ತಿ ದುಬೈನಾದ್ಯಂತ ಬಿಳಿ ಕಾಲ್ಚೀಲಗಳೊಂದಿಗೆ ಸಾಕಷ್ಟು ಹೊತ್ತು ನಡೆದರೂ ಅವು ಕೊಳಕಾಗಿಯೇ ಇರಲಿಲ್ಲ! ಹೌದು, ಕ್ಯಾಮೆರಾದ ಮುಂದೆ ತಮ್ಮ ಕಾಲ್ಚೀಲಗಳನ್ನು ತೆಗೆದು ತೋರಿಸಿದಾಗ ಅವು ಬಹುತೇಕ ಹೊಸದರಂತೆಯೇ ಇದ್ದವು. ಇದನ್ನು ನೋಡಿದ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ಕಾಲ್ಚೀಲಗಳ ಮೇಲೆ ಕೊಳೆ ಇರುತ್ತದೆ ಎಂದು ನಿರೀಕ್ಷಿಸಿದ್ದವರಿಗೆ ಇದು ನಿಜಕ್ಕೂ ಅಚ್ಚರಿಯ ಫಲಿತಾಂಶವಾಗಿತ್ತು.
ಈ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದಂತೆ, ಜನರು ಪರ-ವಿರೋಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಫಲಿತಾಂಶವನ್ನು ಒಪ್ಪಿಕೊಂಡರೆ, ಇನ್ನೂ ಕೆಲವರು ಇದರಲ್ಲಿ ಏನೋ ಮೋಸವಿದೆ ಎಂದು ಅನುಮಾನಿಸಿದ್ದಾರೆ. “ನಾನು ಒಮ್ಮೆ ಹೀಗೆ ಮಾಡಿದ್ದೆ. ಇದನ್ನು ನಾನು ಒಪ್ಪುತ್ತೇನೆ,” ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. “ನನ್ನ ಶೂ ನೋವು ಕೊಡುತ್ತಿದ್ದ ಕಾರಣ ದುಬೈ ಮಾಲ್‌ನಲ್ಲಿ ಪೂರ್ತಿ ಬರಿಗಾಲಿನಲ್ಲಿ ನಡೆದಿದ್ದೆ. ನನ್ನ ಮನೆಯಕ್ಕಿಂತಲೂ ನೆಲ ಸ್ವಚ್ಛವಾಗಿತ್ತು,” ಎಂದು ಇನ್ನೊಬ್ಬರು ಹೇಳಿದ್ದಾರೆ.
“ಖಂಡಿತವಾಗಿಯೂ ಇವು ಒಂದೇ ಕಾಲ್ಚೀಲಗಳಲ್ಲ,” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ‘ಲವಿನ್ ದುಬೈ’ ಎಂಬ ಇನ್‌ಸ್ಟಾಗ್ರಾಮ್ ಪುಟವು ಈ ವಿಡಿಯೋವನ್ನು ಇತ್ತೀಚೆಗೆ ಹಂಚಿಕೊಂಡಿದ್ದು, ಇದು 30,000 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ.
