ದಾವಣಗೆರೆ: ಮನೆಯ ಬಳಿಯ ಆಟವಾಡುವಾಗಲೇ ಮಗು ನೀರಿನ ಸಂಪ್ ಗೆ ಬಿದ್ದು ಮೃತಪಟ್ಟ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸುರಹೊನ್ನೆ ಶಾಂತಿನಗರದಲ್ಲಿ ನಡೆದಿದೆ.
ಮನೆಯೊಂದರ ನೀರಿನ ಸಂಪ್ ಗೆ ಬಿದ್ದು ಒಂದೂವರೆ ವರ್ಷದ ಹೆಣ್ಣು ಮಗು ಮೃತಪಟ್ಟಿದೆ. ಶುಕ್ರವಾರ ಮಂಜುನಾಥ್ ಎಂಬುವರ ಮನೆಯಲ್ಲಿ ಘಟನೆ ನಡೆದಿದೆ. ನಲ್ಲಿ ನೀರು ಬಿಟ್ಟಿದ್ದರಿಂದ ಸಂಪ್ ಗೆ ಮುಚ್ಚಿದ್ದ ಮುಚ್ಚಳವನ್ನು ತೆಗೆದಿಡಲಾಗಿದ್ದು, ಆಟವಾಡುತ್ತಾ ಅಲ್ಲಿಗೆ ಬಂದ ಮಂಜುನಾಥ್ ಅವರ ಪುತ್ರಿ ಆಕಸ್ಮಿಕವಾಗಿ ಸಂಪ್ ಗೆ ಬಿದ್ದಿದ್ದಾಳೆ.
ಇದನ್ನು ಪೋಷಕರು ಗಮನಿಸದೇ ಮುಚ್ಚಳ ಮುಚ್ಚಿದ್ದಾರೆ. ಕೆಲ ಸಮಯದ ನಂತರ ಮಗು ಕಾಣಿಸದಿದ್ದಾಗ ಎಲ್ಲಾ ಕಡೆ ಹುಡುಕಿದ್ದಾರೆ. ಅನುಮಾನದಿಂದ ಸಂಪ್ ಮುಚ್ಚಳ ತೆಗೆದು ನೋಡಿದಾಗ ಮಗು ಇರುವುದು ಗೊತ್ತಾಗಿದೆ. ಕೂಡಲೇ ಮಗುವನ್ನು ನ್ಯಾಮತಿಯ ಸಮುದಾಯ ಆರೋಗ್ಯ ಕೇಂದ್ರ, ನಂತರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ, ಈ ವೇಳೆಗಾಗಲೇ ಮಗು ಮೃತಪಟ್ಟಿತ್ತು ಎನ್ನಲಾಗಿದೆ.