ನವದೆಹಲಿ: ಪಿಎಫ್ ನಿಯಮ ಸರಳೀಕರಣ ಮಾಡಲಾಗಿದ್ದು, 8 ಕೋಟಿ ಚಂದಾದಾರರಿಗೆ ವರದಾನವಾಗಿದೆ. ಭವಿಷ್ಯನಿಧಿ ಹಣ ಹಿಂಪಡೆಯುವ ವೇಳೆ ಚಂದಾದಾರರು ಇನ್ನು ಮುಂದೆ ಆನ್ಲೈನ್ ನಲ್ಲಿ ರದ್ದು ಮಾಡಲಾದ ಚೆಕ್ ಅಪ್ಲೋಡ್ ಮಾಡುವ ಅಗತ್ಯವಿಲ್ಲ. ಇದಲ್ಲದೆ, ಬ್ಯಾಂಕ್ ಖಾತೆಯನ್ನು ಉದ್ಯೋಗದ ಸಂಸ್ಥೆಯ ದೃಢಕರಿಸುವ ಅಗತ್ಯವಿಲ್ಲ ಎಂದು ನೌಕರರ ಭವಿಷ್ಯ ನಿಧಿ ಸಂಘಟನೆ(ಇಪಿಎಫ್ೊ) ಗುರುವಾರ ಮಾಹಿತಿ ನೀಡಿದೆ.
ಪ್ರಸ್ತುತ ಚಂದಾದಾರರು ಆನ್ಲೈನ್ ಮೂಲಕ ಭವಿಷ್ಯ ನಿಧಿ ಹಣ ಹಿಂಪಡೆಯಲು ಅರ್ಜಿ ಸಲ್ಲಿಸುವ ವೇಳೆ ಚೆಕ್ ಪ್ರತಿಯ ಫೋಟೋ ಅಪ್ಲೋಡ್ ಮಾಡಬೇಕು. ಸಾರ್ವತ್ರಿಕ ಖಾತೆ ಸಂಖ್ಯೆ(ಯುಎಎನ್) ಅಥವಾ ಪಿಎಫ್ ಸಂಖ್ಯೆ ಜೊತೆಗೆ ಜೋಡಣೆ ಆಗಿರುವ ಬ್ಯಾಂಕ್ ಖಾತೆಯ ಪಾಸ್ ಬುಕ್ ಪ್ರತಿಯನ್ನು ಅಪ್ಲೋಡ್ ಮಾಡಬೇಕಿತ್ತು.
ಉದ್ಯೋಗದಾತ ಸಂಸ್ಥೆಯು ಚಂದಾದಾರರು ನಮೂದಿಸುವ ಬ್ಯಾಂಕ್ ಖಾತೆಯ ವಿವರಗಳಿಗೆ ಅನುಮೋದನೆ ನೀಡುವ ಅಗತ್ಯವಿತ್ತು. ಇದೀಗ ಸಂಸ್ಥೆಯು ಇದನ್ನು ದೃಢೀಕರಿಸುವ ಅಗತ್ಯವಿಲ್ಲ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ತಿಳಿಸಿದೆ.