ಉತ್ತರ ಪ್ರದೇಶದ ಹಾಜಿಪುರದಲ್ಲಿ ನಡೆದ ವಿಚಿತ್ರ ಘಟನೆಯೊಂದರಲ್ಲಿ ಪ್ರೀತಿಯ ಅಮಲಿನಲ್ಲಿ ಮುಳುಗಿದ್ದ ಯುವಕನೊಬ್ಬ ರೈಲ್ವೆ ಹಳಿ ಮೇಲೆ ಕುಳಿತುಕೊಂಡು ಫೋನಿನಲ್ಲಿ ಮಾತನಾಡುತ್ತಾ ರೈಲಿಗೆ ತಡೆಯೊಡ್ಡಿದ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಚಾಲಕನ ಪ್ರತಿಕ್ರಿಯೆ ಮತ್ತು ಯುವಕನ ನಿರ್ಲಕ್ಷ್ಯಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಯುವಕ ರೈಲ್ವೆ ಹಳಿಯ ಮಧ್ಯದಲ್ಲಿ ಕುಳಿತು ತನ್ನ ಪ್ರಿಯತಮೆಯೊಂದಿಗೆ ಫೋನಿನಲ್ಲಿ ಮಾತನಾಡುತ್ತಿದ್ದು, ಆತ ಎಷ್ಟು ಮಗ್ನನಾಗಿದ್ದನೆಂದರೆ, ಹಿಂದಿನಿಂದ ಬರುತ್ತಿದ್ದ ರೈಲಿನ ಹಾರ್ನ್ ಸಹ ಕೇಳಿಲ್ಲ. ರೈಲು ಹತ್ತಿರಕ್ಕೆ ಬರುತ್ತಿರುವುದನ್ನು ನೋಡಿದ ಚಾಲಕ ಪದೇ ಪದೇ ಹಾರ್ನ್ ಮಾಡಿದರೂ ಯುವಕ ಮಾತ್ರ ಕದಲಲಿಲ್ಲ.
ಅಂತಿಮವಾಗಿ, ಚಾಲಕ ರೈಲನ್ನು ತುರ್ತಾಗಿ ನಿಲ್ಲಿಸಬೇಕಾಯಿತು. ರೈಲು ಯುವಕನಿಗೆ ಕೆಲವೇ ಅಡಿಗಳ ದೂರದಲ್ಲಿ ನಿಂತಿದ್ದು, ಇದರಿಂದ ಕೋಪಗೊಂಡ ಚಾಲಕ ರೈಲಿನಿಂದ ಕೆಳಗಿಳಿದು ಬಂದು ಯುವಕನತ್ತ ಕಲ್ಲು ಎಸೆದಿದ್ದಾರೆ. ಕಲ್ಲು ತಗುಲಿದ ಕೂಡಲೇ ಯುವಕ ಓಡಿಹೋಗಿದ್ದಾನೆ. ಈ ಸಂಪೂರ್ಣ ಘಟನೆಯನ್ನು ಅಲ್ಲಿದ್ದ ಯಾರೋ ಒಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಈಗ ವೈರಲ್ ಆಗಿದ್ದು, ಯುವಕನ ಬೇಜವಾಬ್ದಾರಿತನಕ್ಕೆ ಮತ್ತು ಚಾಲಕನ ಪ್ರತಿಕ್ರಿಯೆಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.