ಛತ್ರಪತಿ ಸಂಭಾಜಿನಗರದಲ್ಲಿ ನಾಯಿಯಿಂದ ತಪ್ಪಿಸಿಕೊಳ್ಳುವಾಗ ಬಾವಿಗೆ ಬಿದ್ದ ವ್ಯಕ್ತಿಯೊಬ್ಬ ಎರಡು ರಾತ್ರಿಗಳ ಕಾಲ ಬಾವಿಯಲ್ಲೇ ಇದ್ದು ಜೀವನ್ಮರಣ ಹೋರಾಟ ನಡೆಸಿದ್ದಾನೆ. ಗ್ರಾಮಸ್ಥರು ಗುರುವಾರ ಆತನನ್ನು ರಕ್ಷಿಸಿದ್ದಾರೆ.
ವಿವರಗಳ ಪ್ರಕಾರ, ಸಂದೀಪ್ ಓಂಕಾರ್ ಜಾಟ್ಕವಾಡೆ (30, ವಾಧೋನಾ) ಛತ್ರಪತಿ ಸಂಭಾಜಿನಗರ ಜಿಲ್ಲೆಯ ಕನ್ನಡ್ ತಾಲೂಕಿನ ಪಿಶೋರ್‌ಗೆ ಬಂದಿದ್ದರು. ಅವರು ಜೆಸಿಬಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಮಂಗಳವಾರ (ಮಾರ್ಚ್ 25), ಅಂಜನ್ ಪಾಲ್ಶಿ ಯೋಜನೆಯ ಬಳಿಯ ಕೃಷಿ ಭೂಮಿಯಲ್ಲಿ ಜೆಸಿಬಿ ಕೆಲಸ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ನಾಯಿಯೊಂದು ಆತನ ಮೇಲೆ ದಾಳಿ ಮಾಡಿದೆ.
ಜೀವ ಉಳಿಸಿಕೊಳ್ಳಲು ಓಡಿದಾಗ ನಾಯಿ ಆತನನ್ನು ಬೆನ್ನಟ್ಟಲು ಪ್ರಾರಂಭಿಸಿದ್ದು, ತಪ್ಪಿಸಿಕೊಳ್ಳುವಾಗ ಸುಮಾರು 100 ಅಡಿ ಆಳದ ಬಾವಿಗೆ ಆತ ಬಿದ್ದನು. ಸಹಾಯಕ್ಕಾಗಿ ಕೂಗಿದರೂ, ಆತನ ಧ್ವನಿಯನ್ನು ಕೇಳುವವರು ಯಾರೂ ಇರಲಿಲ್ಲ. ಆತ ಒಂದು ಹಗಲು ಮತ್ತು ಎರಡು ರಾತ್ರಿ ಬಾವಿಯಲ್ಲೇ ಇದ್ದನು. ಗುರುವಾರ ಬೆಳಿಗ್ಗೆ, ಗ್ರಾಮದ ಕೆಲವು ಮಕ್ಕಳು ಹಾದುಹೋಗುವಾಗ ಬಾವಿಯಲ್ಲಿ ಸಂದೀಪ್‌ನ ಧ್ವನಿಯನ್ನು ಕೇಳಿದ್ದು, ಅವರು ಕೃಷಿ ಭೂಮಿಯ ಮಾಲೀಕರಿಗೆ ತಿಳಿಸಿದ್ದರು.
ಗ್ರಾಮ ಪಂಚಾಯತ್ ಸದಸ್ಯ ಗಣೇಶ್ ಮೊಕಾಸೆ, ಬೀಟ್ ಜಮಾಧಾರ್ ವಸಂತ್ ಪಾಟೀಲ್ ಮತ್ತು ಇತರರು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿ ಹಗ್ಗದಿಂದ ಕಟ್ಟಿದ ಟೈರ್ ಅನ್ನು ಬಾವಿಗೆ ಇಳಿಸಿದರು. ಸಂದೀಪ್ ಟೈರ್ ಮೇಲೆ ಕುಳಿತ ನಂತರ ಆತನನ್ನು ಬಾವಿಯಿಂದ ಹೊರತೆಗೆಯಲಾಯಿತು. ತಕ್ಷಣ ಅವರನ್ನು ಪಿಶೋರ್‌ನ ಗ್ರಾಮೀಣ ಆಸ್ಪತ್ರೆಗೆ ದಾಖಲಿಸಲಾಯಿತು.