ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಮಧ್ಯರಾತ್ರಿ ವೇಳೆ ಮಹಿಳೆಯೊಬ್ಬರು ವಿಚಿತ್ರವಾಗಿ ನಡೆದುಕೊಂಡು ಹೋಗಿ ಮನೆಗಳ ಡೋರ್‌ಬೆಲ್‌ಗಳನ್ನು ಬಾರಿಸಿ ಮಾಯವಾಗುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾರ್ಚ್ 19 ರಂದು ರೆಕಾರ್ಡ್ ಆಗಿರುವ ಈ ಸಿಸಿ ಟಿವಿ ದೃಶ್ಯಗಳು ಆ ಪ್ರದೇಶದಲ್ಲಿ ಭಯ ಮತ್ತು ಊಹಾಪೋಹಗಳಿಗೆ ಕಾರಣವಾಗಿವೆ.
ಸಿಸಿ ಟಿವಿ ದೃಶ್ಯಗಳಲ್ಲಿ ಮಹಿಳೆಯ ಮುಖ ಸ್ಪಷ್ಟವಾಗಿ ಕಾಣುತ್ತಿಲ್ಲ. ಮನೆ ಒಳಗಿನಿಂದ ಕರೆದಾಗ ಆಕೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ಆಕೆ ಮುಂದೆ ಸಾಗುತ್ತಾ ವಿವಿಧ ಮನೆಗಳ ಬೆಲ್‌ಗಳನ್ನು ಬಾರಿಸುತ್ತಾ ನಡೆದಿದ್ದಾಳೆ.
ಈ ವಿಡಿಯೊದಲ್ಲಿ ಕಂಡುಬರುವ ಮತ್ತೊಂದು ಆತಂಕಕಾರಿ ಅಂಶವೆಂದರೆ ಮಹಿಳೆಯ ಉಪಸ್ಥಿತಿಗೆ ಪ್ರಾಣಿಗಳು ತೋರುವ ಪ್ರತಿಕ್ರಿಯೆ. ಆಕೆ ಸಮೀಪಿಸುತ್ತಿದ್ದಂತೆ ಬೀದಿ ನಾಯಿಗಳು ಇದ್ದಕ್ಕಿದ್ದಂತೆ ಓಡಿಹೋಗುತ್ತಿರುವುದು ದೃಶ್ಯಗಳಲ್ಲಿ ಕಂಡುಬರುತ್ತದೆ. ಇದರ ಜೊತೆಗೆ, ಆಕೆಯನ್ನು ಎದುರಿಸಿದವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಕೆಲವು ಸ್ಥಳೀಯರು ಹೇಳುತ್ತಾರೆ, ಆದರೆ ಈ ಹೇಳಿಕೆಗಳಿಗೆ ಯಾವುದೇ ನಿರ್ದಿಷ್ಟ ಪುರಾವೆಗಳಿಲ್ಲ.
ಈ ಮಧ್ಯೆ, ವೈರಲ್ ವಿಡಿಯೊವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದು ತಮಾಷೆ ಅಥವಾ ತಪ್ಪು ತಿಳುವಳಿಕೆ ಎಂದು ಕೆಲವರು ನಂಬಿದರೆ, ಇನ್ನು ಕೆಲವರು ಗಂಭೀರವಾದ ಏನೋ ಇದೆ ಎಂದು ಶಂಕಿಸುತ್ತಾರೆ. ನಿವಾಸಿಗಳ ಭಯವನ್ನು ಹೋಗಲಾಡಿಸಲು ಮತ್ತು ಸತ್ಯವನ್ನು ಬಹಿರಂಗಪಡಿಸಲು ಈ ವಿಷಯವನ್ನು ಕೂಲಂಕಷವಾಗಿ ತನಿಖೆ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
#WATCH | MP: Mysterious Woman Caught Ringing Bell Of Residences Late Night In Gwalior#MadhyaPradesh #gwalior #MPNews pic.twitter.com/ruJ2F6P8BZ
— Free Press Madhya Pradesh (@FreePressMP) March 22, 2025