ಮಧ್ಯಪ್ರದೇಶದ ರಾಜಗಢ ಜಿಲ್ಲೆಯ ಸರಂಗ್‌ಪುರದಲ್ಲಿ ಬೈಕ್ ಓಡಿಸುತ್ತಿದ್ದಾಗ ಜೇಬಿನಲ್ಲಿದ್ದ ಮೊಬೈಲ್ ಫೋನ್ ಇದ್ದಕ್ಕಿದ್ದಂತೆ ಸ್ಫೋಟಗೊಂಡ ಕಾರಣ 19 ವರ್ಷದ ಯುವಕನಿಗೆ ಗಂಭೀರ ಗಾಯಗಳಾಗಿವೆ. ಇದರಿಂದ ಬೈಕ್ ಮೇಲಿನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಬಿದ್ದ ಯುವಕನಿಗೆ ತೀವ್ರ ಪೆಟ್ಟು ಬಿದ್ದಿದೆ.
ಅರವಿಂದ್ ಎಂಬ ಯುವಕ ಸ್ಥಳೀಯ ಮಾರುಕಟ್ಟೆಯಿಂದ ತರಕಾರಿ ಖರೀದಿಸಿ ತನ್ನ ಗ್ರಾಮ ನೈನವಾಡಕ್ಕೆ ವಾಪಸ್ ಹೋಗುತ್ತಿದ್ದಾಗ ಟೋಲ್ ಬೂತ್ ಬಳಿ ಈ ಘಟನೆ ನಡೆದಿದೆ. ಇದ್ದಕ್ಕಿದ್ದಂತೆ ಮೊಬೈಲ್ ಸ್ಫೋಟಗೊಂಡ ಪರಿಣಾಮ ಅರವಿಂದ್‌ನ ತೊಡೆ ಸಂದು ಮತ್ತು ತಲೆಗೆ ಗಂಭೀರ ಗಾಯಗಳಾಗಿವೆ.
ಮೊದಲು ಸರಂಗ್‌ಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ, ಗಾಯಗಳ ತೀವ್ರತೆಯಿಂದಾಗಿ ಶಾಜಾಪುರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮೊಬೈಲ್ ಹೊಸದಾಗಿದ್ದು, ರಾತ್ರಿಯಿಡೀ ಚಾರ್ಜ್ ಮಾಡಲಾಗಿತ್ತು. ತರಕಾರಿ ಖರೀದಿಸುವಾಗ ಅದನ್ನು ಜೇಬಿನಲ್ಲಿ ಇಟ್ಟುಕೊಂಡಿದ್ದನು. ಸುಮಾರು ಒಂದು ಗಂಟೆಯ ನಂತರ ಮನೆಗೆ ಹೊರಟಾಗ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ ಎಂದು ಅರವಿಂದ್‌ನ ಸಹೋದರ ತಿಳಿಸಿದ್ದಾನೆ.
ಅರವಿಂದ್‌ಗೆ ಚಿಕಿತ್ಸೆ ನೀಡಿದ ಡಾ.ನೈನ್ ನಗರ ಅವರು, ಶಾಜಾಪುರ ಜಿಲ್ಲಾ ಆಸ್ಪತ್ರೆಗೆ ದಾಖಲಾದ ಬಳಿಕ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ. ಇಂತಹ ಘಟನೆಗಳು ನಡೆಯದಂತೆ ಮೊಬೈಲ್ ಫೋನ್ ಬಳಸುವಾಗ ಎಚ್ಚರಿಕೆ ವಹಿಸುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.