
ಬೆಂಗಳೂರು: ವೃದ್ಧ ದಂಪತಿಗೆ ಖಾಸಗಿ ಬ್ಯಾಂಕ್ ನ ಡೆಪ್ಯೂಟಿ ಮಹಿಳಾ ಮ್ಯಾನೇಜರ್ ಓರ್ವರು ವಂಚಿಸಿ 50 ಲಕ್ಷ ರೂಪಾಯಿ ದೋಚಿರುವ ಘಟನೆ ಬೆಂಗಳೂರಿನ ಗಿರಿನಗರದಲ್ಲಿ ನಡೆದಿದೆ.
ಗಿರಿನಗರದ ಇಂಡಸ್ ಇಂಡ್ ಬ್ಯಾಂಕ್ ನ ಉಪ ವ್ಯವಸ್ಥಾಪಕಿ ಮೇಘನಾ ಎಫ್ ಡಿ ಅಕೌಂಟ್ ಮಾಡಿಕೊಡುವುದಾಗಿ ಹೇಳಿ ವೃದ್ಧೆಯಿಂದ ಆರ್ ಟಿಜಿಎಸ್ ಕಾಗದಕ್ಕೆ ಸಹಿ ಹಾಕಿಸಿಕೊಂಡು ಬಳಿಕ ತಮ್ಮ ಹೊಸ ಬ್ಯಾಂಕ್ ಖಾತೆ ತೆಗೆದು ಆರ್ ಟಿಜಿಎಸ್ ಮೂಲಕ 50 ಲಕ್ಷ ರೂಪಾಯಿ ವರ್ಗಾವಣೆ ಮಾಡಿಕೊಂಡಿದ್ದಾಳೆ.
ವೃದ್ಧ ದಂಪತಿ ಇಂಡಸ್ ಇಂಡ್ ಬ್ಯಾಂಕ್ ನಲ್ಲಿ ಜಂಟಿ ಖಾತೆ ತೆರೆದಿದ್ದರು. ಇದೇ ಬ್ಯಾಂಕ್ ನಲ್ಲಿ ಎಫ್ ಡಿ ಖಾತೆಯನ್ನೂ ಹೊಂದಿದ್ದರು. ವೃದ್ಧೆಗೆ ಬ್ಯಾಂಕ್ ನ ಉಪ ವ್ಯವಸ್ಥಾಪಕಿ ಮೇಘನಾ ಪರಿಚಯವಗಿದ್ದಾಳೆ. ಮೇಘನಾ ಜೊತೆ ಆಗಾಗ ವೃದ್ಧೆ ಮನೆ ವಿಚಾರವನ್ನು ಹಂಚಿಕೊಳ್ಳುತ್ತಿದ್ದರು. ಇತ್ತೀಚೆಗೆ ಮನೆ ಮಾರಾಟ ಮಾಡಿರುವ ವಿಚಾರವನ್ನೂ ಹಂಚಿಕೊಂಡಿದ್ದರು. ಮನೆ ಮಾರಾಟದಿಂದ ವೃದ್ಧ ದಂಪತಿಯ ಬ್ಯಾಂಕ್ ಖಾತೆಗೆ 1 ಕೋಟಿ ಹಣ ಜಮೆ ಆಗಿತ್ತು.
ವೃದ್ಧೆ ಬ್ಯಾಂಕ್ ಗೆ ಹೋದಾಗ ಮೇಘನಾ ನಿಮ್ಮ ಎರಡು ಬಾಂಡ್ ಅವಧಿ ಮುಗಿದಿದೆ ಎಂದು ಸುಳ್ಳು ಹೇಳಿ ಹೊಸ ಬಾಂಡ್ ಖರೀದಿಗೆ ದಖಲೆಗಳು, ಚೆಕ್ ಅಗತ್ಯವಿದೆ ಎಂದು ಹೇಳಿದ್ದಾಳೆ. ವೃದ್ಧೆ ಎರಡು ಖಾಲಿ ಚೆಕ್ ಗಳಿಗೆ ಸಹಿ ಮಾಡಿಕೊತ್ಟಿದ್ದಾರೆ. ಕೆಲ ದಾಖಲೆ ಪತ್ರಗಳಿಗೂ ಸಹಿ ಮಾಡುವಂತೆ ಮೇಘನಾ ಹೇಳಿದ್ದರಿಂದ ದಾಖಲೆಗಳಿಗೂ ಸಹಿ ಮಾಡಿದ್ದಾರೆ. ಈ ವೇಳೆ ಆರ್ ಟಿಜಿಎಸ್ ಪತ್ರಕ್ಕೂ ಸಹಿ ಪಡೆದು, ಹಣ ವರ್ಗಾವಣೆ ಮಾಡಿಕೊಂಡಿದ್ದಾಳೆ.
ಇತ್ತೀಚೆಗೆ ವೃದ್ಧೆಯ ಮಗ ಮೊಬೈಲ್ ಪರಿಶೀಲಿಸಿದಾಗ ಖಾತೆಯಲ್ಲಿ ಹಣ ಕಡಿಮೆ ಇರುವುದು ಕಂಡು ಅನುಮಾನಗೊಂಡಿದ್ದಾರೆ. ಬ್ಯಾಂಕ್ ಗೆ ಹೋಗಿ ವೃದ್ಧೆ ವಿಚಾರಿಸಿದಾಗ ನೀವು ಹೇಳಿದ ಬ್ಯಾಂಕ್ ಖಾತೆಗೆ ಆರ್ ಟಿಜಿಎಸ್ ಮಾಡಿರುವುದಾಗಿ ಮೇಘನಾ ಹೇಳಿದ್ದಾಳೆ. ಇದರಿಂದ ವೃದ್ಧೆ ಗಿರಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ನಡೆಸಿದ ಪೊಲೀಸರಿ ಬ್ಯಾಂಕ್ ಮ್ಯಾನೇಜರ್ ಮೇಘನಾ ಕಳ್ಳಾಟ ಬಯಲಾಗಿದೆ.
ಪ್ರಕರಣ ಸಂಬಂಧ ಆರೋಪಿಗಳಾದ ಮೇಘನಾ, ಆಕೆಯ ಪತಿ ಶಿವಪ್ರಸಾದ್, ಸ್ನೇಹಿತರದಾ ವರದರಾಜು, ಅನ್ವರ್ ಘೋಷ್ ನನ್ನು ಬಂಧಿಸಿದ್ದಾರೆ.