ದಕ್ಷಿಣ ಅಟ್ಲಾಂಟಿಕ್ ಸಾಗರದಲ್ಲಿ ಎವರೆಸ್ಟ್ ಪರ್ವತದ ಐದು ಪಟ್ಟು ಗಾತ್ರದ, ಒಂದು ಟ್ರಿಲಿಯನ್ ಟನ್ ತೂಕದ ದೈತ್ಯ ಮಂಜುಗಡ್ಡೆ ತೇಲುತ್ತಿದೆ. ಈ ‘ಮೆಗಾಬರ್ಗ್’ ಅನ್ನು A23a ಎಂದು ಕರೆಯಲಾಗುತ್ತಿದ್ದು, ಇದು ದಕ್ಷಿಣ ಜಾರ್ಜಿಯಾ ದ್ವೀಪದ ಕಡೆಗೆ ವೇಗವಾಗಿ ಸಾಗುತ್ತಿದೆ. “ಗೇಮ್ ಆಫ್ ಥ್ರೋನ್ಸ್” ಶೈಲಿಯ ಬೃಹತ್ ಹಿಮಗೋಡೆಯಂತೆ ಕಾಣುವ ಈ ಮಂಜುಗಡ್ಡೆಯನ್ನು ಡಿಸೆಂಬರ್ 2023 ರಲ್ಲಿ ಬ್ರಿಟಿಷ್ ಅಂಟಾರ್ಕ್ಟಿಕ್ ಸರ್ವೇಯ ಭೌತಿಕ ಸಾಗರಶಾಸ್ತ್ರಜ್ಞ ಆಂಡ್ರ್ಯೂ ಮೈಜರ್ಸ್ ಹತ್ತಿರದಿಂದ ಪರಿಶೀಲಿಸಿದ್ದಾರೆ.
1986ರಲ್ಲಿ ಅಂಟಾರ್ಟಿಕಾದ ವೆಡೆಲ್ ಸಮುದ್ರದ ರಾನ್ನೆ-ಫಿಲ್ಚ್ನರ್ ಐಸ್ ಶೆಲ್ಫ್‌ನಿಂದ ಬೇರ್ಪಟ್ಟ ಈ ಮಂಜುಗಡ್ಡೆ, ಸುಮಾರು 20 ವರ್ಷಗಳ ಕಾಲ ಅಲ್ಲೇ ಸ್ಥಿರವಾಗಿತ್ತು. 2020ರಲ್ಲಿ ಉತ್ತರ ದಿಕ್ಕಿಗೆ ನಿಧಾನವಾಗಿ ಚಲಿಸಲು ಪ್ರಾರಂಭಿಸಿ, ಕಳೆದ ವರ್ಷ ಆರು ತಿಂಗಳ ಕಾಲ ಸಮುದ್ರದ ಪ್ರವಾಹದಲ್ಲಿ ಸಿಲುಕಿತ್ತು. ನಂತರ, ಅದು ದಕ್ಷಿಣ ಜಾರ್ಜಿಯಾ ದ್ವೀಪದ ಕಡೆಗೆ ಹೊರಟಿದೆ. ಸುಮಾರು 40 ಮೈಲಿಗಳಷ್ಟು ವಿಸ್ತಾರವಿರುವ ಈ ಮಂಜುಗಡ್ಡೆ ದಿನಕ್ಕೆ 30 ಕಿಲೋಮೀಟರ್ ವೇಗದಲ್ಲಿ ದ್ವೀಪದ ಕಡೆಗೆ ಸಾಗುತ್ತಿದೆ.
ದಕ್ಷಿಣ ಜಾರ್ಜಿಯಾದ ಸುತ್ತಲಿನ ನೀರು ಅಂಟಾರ್ಕ್ಟಿಕಾದ ನೀರಿಗಿಂತ ಬೆಚ್ಚಗಿರುವುದರಿಂದ, ಈ ಮಂಜುಗಡ್ಡೆ ಬೇಗನೆ ತೆಳುವಾಗಿ ಒಡೆಯುವ ಸಾಧ್ಯತೆಯಿದೆ. ಆದರೂ, ಇದು ಸ್ಥಳೀಯವಾಗಿ ಪರಿಣಾಮ ಬೀರಲಿದೆ. ದಕ್ಷಿಣ ಜಾರ್ಜಿಯಾದ ಸುತ್ತಮುತ್ತಲಿನ ನೀರನ್ನು ಸಂತಾನೋತ್ಪತ್ತಿ ಮತ್ತು ಆಹಾರಕ್ಕಾಗಿ ಬಳಸುವ ಪೆಂಗ್ವಿನ್‌ಗಳು ಮತ್ತು ಸೀಲುಗಳ ಮೇಲೆ ಈ ಮಂಜುಗಡ್ಡೆಯ ಉಪಸ್ಥಿತಿಯು ಪರಿಣಾಮ ಬೀರಬಹುದು. ದೈತ್ಯ ಮಂಜುಗಡ್ಡೆಗಳು ತಾವು ಹಾದುಹೋಗುವ ನೀರಿನಲ್ಲಿ ಪೋಷಕಾಂಶಗಳನ್ನು ಒದಗಿಸುವುದರಿಂದ, ಕಡಿಮೆ ಉತ್ಪಾದಕ ಪ್ರದೇಶಗಳಲ್ಲಿ ಸಮೃದ್ಧ ಪರಿಸರ ವ್ಯವಸ್ಥೆಗಳನ್ನು ಸೃಷ್ಟಿಸಬಹುದು. ಆದರೆ, ದಕ್ಷಿಣ ಜಾರ್ಜಿಯಾದಂತಹ ಸ್ಥಳಗಳಲ್ಲಿ, ಇದು ಸ್ಥಳೀಯ ಪ್ರಾಣಿಗಳಿಗೆ ತೊಂದರೆಯಾಗಬಹುದು.
“ದೊಡ್ಡ ಮಂಜುಗಡ್ಡೆಯಿಂದಾಗಿ ಹಡಗು ಸಂಚಾರಕ್ಕೆ ತೊಂದರೆಯಾಗುತ್ತದೆ” ಎಂದು ದಕ್ಷಿಣ ಜಾರ್ಜಿಯಾದ ಮುಖ್ಯ ಕಾರ್ಯನಿರ್ವಾಹಕ ಲಾರಾ ಸಿಂಕ್ಲೇರ್ ವಿಲ್ಲಿಸ್ ಹೇಳಿದ್ದಾರೆ. ಈ ದೈತ್ಯ ಮಂಜುಗಡ್ಡೆಯಿಂದಾಗಿ ದಕ್ಷಿಣ ಜಾರ್ಜಿಯಾ ದ್ವೀಪದಲ್ಲಿನ ಪರಿಸರ ವ್ಯವಸ್ಥೆ ಮತ್ತು ಹಡಗು ಸಂಚಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
World’s biggest iceberg — a massive wall of ice named A23a – nears South Georgia. pic.twitter.com/WhxjfyGCpY
— The Associated Press (@AP) March 14, 2025