
ಬೆಂಗಳೂರು: ಸಾರಿಗೆ ನೌಕರರ ಆರೋಗ್ಯ ಯೋಜನೆ ವಿಸ್ತರಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ವಿಧಾನಪರಿಷತ್ ನಲ್ಲಿ ಬಿಜೆಪಿ ಸದಸ್ಯ ಎಸ್. ಕೇಶವ ಪ್ರಸಾದ್ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಪ್ರಸ್ತುತ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ನೌಕರರಿಗೆ ಕಲ್ಪಿಸಿರುವ ನಗದು ರಹಿತ ವೈದ್ಯಕೀಯ ಚಿಕಿತ್ಸೆ ನೀಡುವ ಆರೋಗ್ಯ ಯೋಜನೆಯನ್ನು ವಾಯುವ್ಯ ಮತ್ತು ಕಲ್ಯಾಣ ಕರ್ನಾಟಕ ನಿಗಮಗಳಲ್ಲಿ ಹಂತ ಹಂತವಾಗಿ ಜಾರಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಸಾರಿಗೆ ನೌಕರರು ಪ್ರತಿ ತಿಂಗಳು 660 ರೂ. ಪಾವತಿಸಿದರೆ ಅವರ ತಂದೆ, ತಾಯಿ ಸೇರಿ ಕುಟುಂಬದ ಸದಸ್ಯರು ಉಚಿತವಾಗಿ ಚಿಕಿತ್ಸೆ ಪಡೆಯಬಹುದು. 250 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.