
ಬೆಂಗಳೂರು: ನಬಾರ್ಡ್ ಹಣಕಾಸು ನೆರವು ನೀಡುವಲ್ಲಿ ಈ ವರ್ಷ ಶೇಕಡ 58 ರಷ್ಟು ಇಳಿಕೆಯಾಗಿದೆ. ಅನುದಾನ ಕಡಿಮೆ ನೀಡಿದರೆ ರೈತರಿಗೆ ನೀಡುವ ಸಾಲ ಸೌಲಭ್ಯದ ಪ್ರಮಾಣ ಕೂಡ ಕಡಿಮೆಯಾಗಲಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ದಿನೇಶ್ ಗೂಳಿಗೌಡ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ನಬಾರ್ಡ್ ರಾಜ್ಯಕ್ಕೆ ನೀಡುವ ನೆರವನ್ನು ಶೇಕಡ 58 ರಷ್ಟು ಕಡಿಮೆ ಮಾಡಿದ್ದರಿಂದ ರಾಜ್ಯದ ರೈತರಿಗೆ ಸಹಕಾರ ಸಂಘಗಳ ಮೂಲಕ ಸಾಲ ನೀಡಲು ಅಡಚಣೆಯಾಗಿದೆ. ಕಳೆದ ವರ್ಷ 3226 ಕೋಟಿ ರೂಪಾಯಿ ಮಾತ್ರ ಮಂಜೂರಾಗಿದ್ದು, ಇನ್ನಷ್ಟು ಹೆಚ್ಚು ನೆರವು ನೀಡುವಂತೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ರಾಜ್ಯದ ಬೇಡಿಕೆ 9219 ಕೋಟಿ ರೂ.ಗಳಾಗಿದ್ದು ನೆರವು ಕಡಿಮೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ನಬಾರ್ಡ್ ನೆರವು ಕಡಿಮೆಯಾಗಿದ್ದು ಏಕೆ? ರೈತರ ಸಾಲಕ್ಕೆ ಸರ್ಕಾರ ಪರ್ಯಾಯ ಮಾರ್ಗ ಏನು ಹುಡುಕಿದೆ ಎಂದು ದಿನೇಶ್ ಗೂಳಿಗೌಡ ಪ್ರಶ್ನಿಸಿದ್ದಾರೆ.
ಈ ವೇಳೆ ಸಚಿವರು ಉತ್ತರ ನೀಡಿ, ರಾಜ್ಯದ ಸಹಕಾರ ಕ್ಷೇತ್ರಕ್ಕೆ ನಬಾರ್ಡ್, NCDC, NGDB ಹಣಕಾಸು ಸಂಸ್ಥೆಗಳು ನೆರವು ನೀಡುತ್ತವೆ. ಅಪೆಕ್ಸ್ ಬ್ಯಾಂಕ್ ಮೂಲಕ ರೈತರಿಗೆ ಅಲ್ಪಾವಧಿ, ಮಧ್ಯಮಾವಧಿ, ದೀರ್ಘಾವಧಿ ಸಾಲ ನೀಡುವ ಸಲುವಾಗಿ ನಬಾರ್ಡ್ 2023- 24ನೇ ಸಾಲಿನಲ್ಲಿ 5600 ಕೋಟಿ ರೂ. ನೀಡಿತ್ತು. ಈ ವರ್ಷ 3236 ಕೋಟಿ ಮಾತ್ರ ನೀಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 2364 ಕೋಟಿ ರೂಪಾಯಿ ಕಡಿಮೆಯಾಗಿದೆ. ಕಳೆದ 5 ವರ್ಷದಲ್ಲಿ ನಬಾರ್ಡ್ ಮತ್ತು ಇತರೆ ಸಂಸ್ಥೆಗಳು ರೈತರಿಗೆ ಸಾಲ ನೀಡಲು ನೀಡಿದ ನೆರವು 5924 ಕೋಟಿ ರೂ. ಕಡಿಮೆಯಾಗಿದೆ ಎಂದು ಹೇಳಿದ್ದಾರೆ.