
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 25-26 ರ ಬಜೆಟ್ ನಲ್ಲಿ ಆರ್ಥಿಕ ಸುಧಾರಣೆ, ಆರ್ಥಿಕ ಸಬಲೀಕರದತ್ತ ರಾಜ್ಯವನ್ನು ತೆಗೆದುಕೊಂಡು ಹೋಗುವ ಯಾವುದೇ ಕ್ರಮ ಇಲ್ಲ. ಇದೊಂದು ಜನರ ಮೇಲೆ ಆರ್ಥಿಕ ಹೊರೆಯನ್ನು ಹೇರಿರುವ ಜನ ವಿರೋಧಿ ನಿರಾಶಾದಾಯಕ ಬಜೆಟ್ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಬಜೆಟ್ ನಲ್ಲಿ ಹೇಳಿರುವುದಕ್ಕೂ ಮಾಡಿರುವುದಕ್ಕೂ ಬಹಳ ವ್ಯತ್ಯಾಸ ಇದೆ. ಕಳೆದ ವರ್ಷ ಒಟ್ಟು ಆದಾಯ 3,68,674 ಕೋಟಿ ಬಜೆಟ್ ನಲ್ಲಿ ಹೇಳಿದ್ದು ಈಗ ಅದು 3,58,657 ಕೋಟಿ ಹತ್ತು ಸಾವಿರ ಕೋಟಿ ಕಡಿಮೆ ಆದಾಯವನ್ನು ರಾಜ್ಯ ಸಾಧಿಸಿದೆ. ಎರಡನೇಯದಾಗಿ ಕಳೆದ ವರ್ಷ ಬಜೆಟ್ ನಲ್ಲಿ ಒಟ್ಟು ವೆಚ್ಚ 3,71,383 ಕೋಟಿ ಎಂದು ಬಜೆಟ್ ನಲ್ಲಿ ಹೇಳಿದ್ದು ಅದು ಬಜೆಟ್ 3,65,865 ಕೋಟಿಗೆ ಇಳಿಸಲಾಗಿದೆ ಅದರಲ್ಲಿಯೂ ಬಂಡವಾಳ ವೆಚ್ಚ ಕುಸಿದಿದೆ. ಅಂದರೆ 2024-25 ಅಭಿವೃದ್ಧಿಯ ದರದಲ್ಲಿ ಕುಂಠಿತವಾಗಿದೆ.
ಈ ವರ್ಷದ ಬಜೆಟ್ ನಲ್ಲಿ ವಿತ್ತೀಯ ಕೊರತೆ 2.95 ಅಂತ ಬಜೆಟ್ ನಲ್ಲಿ ತೋರಿಸಿದ್ದು ವಾಸ್ತವಿಕವಾಗಿ ನಮ್ಮ ಜಿಎಸ್ ಡಿಪಿಯ ಶೇ 3% ಕ್ಕಿಂತ ಹೆಚ್ಚಿಗೆ ಆಗುವುದು ನಿಶ್ಚಿತ. ಇದು ಕೇವಲ ಅಂಕಿ ಅಂಶಗಳ ಹೊಂದಾಣಿಕೆ. ಮತ್ತು ಒಟ್ಟು ಸಾಲ 7,64,655 ಕೋಟಿ ಆಗಿರುವುದು ನಮ್ಮ ಜಿಎಸ್ ಡಿಪಿಯ ಸುಮಾರು 25% ರಷ್ಟು ಇರುವುದು ಆರ್ಥಿಕ ದಿವಾಳಿಗೆ ಸಾಕ್ಷಿಯಾಗಿದೆ ಎಂದಿದ್ದಾರೆ.
ಬಜೆಟ್ ನಲ್ಲಿ ಶಿಕ್ಷಣಕ್ಕೆ ಶೆ 2% ರಷ್ಟು ಮಹಿಳಾ ಮಕ್ಕಳ ಇಲಾಖೆಗೆ ಶೇ 1% ರಷ್ಟು ಕಡಿಮೆ ಅನುದಾನ ನೀಡಲಾಗಿದೆ. ನೀರಾವರಿ, ಗ್ರಾಮೀಣ ಅಭಿವೃದ್ಧಿ, ಕೃಷಿಗೆ ವಿಶೇಷವಾಗಿರುವ ಯಾವುದೇ ಅನುದಾನ ನೀಡದಿರುವುದು ರೈತಾಪಿ ವರ್ಗಕ್ಕೆ ನಿರಾಶಾದಾಯಕವಾಗಿದೆ. ಇದೊಂದು ರೈತ ವಿರೋಧಿ ಬಜೆಟ್ ಆಗಿದೆ. ಪ್ರಾದೇಶಿಕ ಆಸಮತೋಲನ ನಿವಾರಣೆ ಮಾಡಲು ಯಾವುದೇ ದಿಟ್ಟ ಕ್ರಮ ತೆಗೆದುಕೊಳ್ಳುವ ವಿಚಾರ ಈ ಬಜೆಟ್ ನಲ್ಲಿ ಪ್ರಕಟವಾಗಿಲ್ಲ. ಕೆಕೆಆರ್ ಡಿಬಿಗೆ ಕೊಟ್ಟಿರುವ 5000 ಕೋಟಿ ರೂ. ಮೂಗಿಗೆ ತುಪ್ಪ ಸವರಿದಂತೆ. ಏಕೆಂದರೆ ಕಳೆದ ವರ್ಷ ಮೀಸಲಿಟ್ಟ ಹಣ ಖರ್ಚಾಗಿಲ್ಲ. ಕಿತ್ತೂರು ಕರ್ನಾಟಕದ ಅಭಿವೃದ್ಧಿ ಗೆ ಯಾವುದೇ ವಿಶೇಷ ಆರ್ಥಿಕ ನೆರವು ಘೋಷಣೆ ಮಾಡದಿರುವುದು ಆ ಭಾಗದ ಜನರಿಗೆ ನಿರಾಶೆಯಾಗಿದೆ ಎಂದಿದ್ದಾರೆ.