ಪ್ರಯಾಗ್ರಾಜ್‌ನ ಪಿಂಟು ಮಲ್ಲಾ ಎಂಬ ಮೀನುಗಾರ ಮಹಾಕುಂಭ ಮೇಳದಲ್ಲಿ 45 ದಿನಗಳಲ್ಲಿ ಬರೋಬ್ಬರಿ 30 ಕೋಟಿ ರೂಪಾಯಿ ಗಳಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡಾ ರಾಜ್ಯ ವಿಧಾನಸಭೆಯಲ್ಲಿ ಇವರ ಯಶಸ್ಸಿನ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಪಿಂಟು ಮತ್ತು ಅವರ 100 ಸದಸ್ಯರಿರುವ ಕುಟುಂಬ ನೈನಿಯಲ್ಲಿ ವಾಸಿಸುತ್ತಿದೆ. ಮಹಾಕುಂಭಕ್ಕೆ ತಿಂಗಳುಗಳ ಮುಂಚೆಯೇ ಸಿದ್ಧತೆಗಳನ್ನು ಆರಂಭಿಸಿದ್ದರು. ಯಾತ್ರಿಕರಿಗೆ ಅನುಕೂಲವಾಗುವಂತೆ 130 ದೋಣಿಗಳನ್ನು ನಿರ್ಮಿಸಿ, ನಿರ್ವಹಣೆ ಮಾಡಿದರು. ಇದಕ್ಕಾಗಿ ಪಿಂಟು ತಮ್ಮ ತಾಯಿಯ ಚಿನ್ನವನ್ನೂ ಅಡವಿಟ್ಟಿದ್ದರು.
ಮಹಾಕುಂಭದಲ್ಲಿ ದೋಣಿ ಸಂಚಾರಕ್ಕೆ ಸರ್ಕಾರ ನಿಗದಿಪಡಿಸಿದ್ದ ದರವನ್ನು ಮಾತ್ರ ವಿಧಿಸಲಾಗಿತ್ತು. ಆದರೆ, ಕೆಲವು ಭಕ್ತರು ತಾವಾಗಿಯೇ ಹೆಚ್ಚಿನ ಹಣವನ್ನು ನೀಡಿದ್ದಾರೆ ಎಂದು ಪಿಂಟು ಹೇಳುತ್ತಾರೆ. ಒಂದು ದೋಣಿ ನಿರ್ಮಾಣಕ್ಕೆ 50,000 ರಿಂದ 60,000 ರೂಪಾಯಿ ಖರ್ಚಾಗುತ್ತದೆ. ಆದರೆ, ಪ್ರತಿ ದೋಣಿಯಿಂದ ದಿನಕ್ಕೆ 50,000 ರೂಪಾಯಿಗಿಂತಲೂ ಹೆಚ್ಚು ಆದಾಯ ಬಂದಿದೆ. ಒಟ್ಟಾರೆಯಾಗಿ 130 ದೋಣಿಗಳಿಂದ 30 ಕೋಟಿ ರೂಪಾಯಿ ಗಳಿಕೆಯಾಗಿದೆ.
ಪಿಂಟು ಮಲ್ಲಾ ಮತ್ತು ಅವರ ಕುಟುಂಬದವರು ಈ ಯಶಸ್ಸನ್ನು ದೈವಿಕ ಆಶೀರ್ವಾದವೆಂದು ಭಾವಿಸಿದ್ದಾರೆ. ಯೋಗಿ ಆದಿತ್ಯನಾಥ್ ಮತ್ತು ಮೋದಿಜಿಯವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಮಹಾಕುಂಭದಿಂದ ತಮ್ಮ ಜೀವನವೇ ಬದಲಾಗಿದೆ ಎಂದು ಪಿಂಟು ಹೇಳುತ್ತಾರೆ.