ಟಾಲಿವುಡ್ನ ಖ್ಯಾತ ನಿರ್ಮಾಪಕ ಕೆದಾರ್ ಸೆಲಗಂಸೆಟ್ಟಿ (42) ಅವರು ಸೋಮವಾರ ರಾತ್ರಿ ದುಬೈನ ತಮ್ಮ ಅಪಾರ್ಟ್ಮೆಂಟ್ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಅವರ ಸಾವಿನ ಕಾರಣ ಇನ್ನೂ ತಿಳಿದುಬಂದಿಲ್ಲ. ಕುಟುಂಬದವರು ಅಥವಾ ತೆಲುಗು ಚಿತ್ರರಂಗದಿಂದ ಯಾವುದೇ ಅಧಿಕೃತ ಹೇಳಿಕೆಗಳು ಹೊರಬಿದ್ದಿಲ್ಲ. ಆದಾಗ್ಯೂ, ಟಾಲಿವುಡ್ ಮೂಲಗಳು ಕೆದಾರ್ ಸೆಲಗಂಸೆಟ್ಟಿ ಅವರ ನಿಧನವನ್ನು ಖಚಿತಪಡಿಸಿವೆ.
ವರದಿಗಳ ಪ್ರಕಾರ, ಸೆಲಗಂಸೆಟ್ಟಿ ಅವರು ಪಾರ್ಟಿಯೊಂದರಲ್ಲಿ ಭಾಗವಹಿಸಿ ತಮ್ಮ ಅಪಾರ್ಟ್ಮೆಂಟ್ಗೆ ವಾಪಸಾಗಿದ್ದರು. ನಂತರ ಅವರು ನಿದ್ರೆಯಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಮೃತರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.
“ಅವರ ಸಾವಿನ ಬಗ್ಗೆ ನಮಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಅವರ ಸಾವಿನ ಕಾರಣಗಳ ಬಗ್ಗೆಯೂ ನಮಗೆ ತಿಳಿದಿಲ್ಲ” ಎಂದು ತೆಲುಗು ಫಿಲ್ಮ್ ಪ್ರೊಡ್ಯೂಸರ್ಸ್ ಕೌನ್ಸಿಲ್ (TFPC) ನ ಹಿರಿಯ ನಿರ್ಮಾಪಕರೊಬ್ಬರು ತಿಳಿಸಿದ್ದಾರೆ.
ಕೆಲವು ದೊಡ್ಡ ಸಿನಿಮಾ ತಾರೆಯರ ಆಪ್ತ ಸಹಾಯಕ ಎಂದು ನಂಬಲಾದ ಸೆಲಗಂಸೆಟ್ಟಿ ಅವರು ಕಳೆದ ವರ್ಷ ಆನಂದ್ ದೇವರಕೊಂಡ ನಟನೆಯ ಚಿತ್ರವನ್ನು ನಿರ್ಮಿಸಿದ್ದರು. ಅವರು ಇನ್ನೂ ಕೆಲವು ಯೋಜನೆಗಳನ್ನು ಹೊಂದಿದ್ದರು ಎನ್ನಲಾಗಿದೆ.
2024 ರಲ್ಲಿ ಸೈಬರಾಬಾದ್ ಪೊಲೀಸರು ಹೈ-ಟೆಕ್ ಸಿಟಿಯ ಹೋಟೆಲ್ನಲ್ಲಿ ಭೇದಿಸಿದ ಡ್ರಗ್ಸ್ ಪ್ರಕರಣದಲ್ಲಿ ಸೆಲಗಂಸೆಟ್ಟಿ ಅವರ ಹೆಸರು ಸುದ್ದಿಯಲ್ಲಿತ್ತು. ಡ್ರಗ್ಸ್ ಸೇವನೆಗಾಗಿ ಪೊಲೀಸರು ನಿರ್ಮಾಪಕರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅವರು ಜಾಮೀನಿನ ಮೇಲೆ ಹೊರಗಿದ್ದರು.
ನಿರ್ಮಾಪಕರ ಅಕಾಲಿಕ ನಿಧನವು ತೆಲುಗು ಚಿತ್ರರಂಗವನ್ನು ಆಘಾತಕ್ಕೆ ದೂಡಿದೆ. ಅವರ ಸಾವಿನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಎಲ್ಲರೂ ಕಾಯುತ್ತಿದ್ದಾರೆ.