
ಬೆಂಗಳೂರು: ರಾಜ್ಯ ಸರ್ಕಾರ 2024 -25 ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಎಫ್ಎಕ್ಯೂ ಗುಣಮಟ್ಟದ ಬೆಳೆ ಜೋಳ ಖರೀದಿಸಲು ಆದೇಶಿಸಿದೆ.
ಜಿಲ್ಲಾ ಟಾಸ್ಕ್ ಫೋರ್ಸ್ ಗಳ ಶಿಫಾರಸ್ಸಿನಂತೆ ವಿಜಯಪುರ, ಕಲಬುರಗಿ, ಬಾಗಲಕೋಟೆ, ಯಾದಗಿರಿ, ಬೀದರ್, ಕೊಪ್ಪಳ, ರಾಯಚೂರು, ವಿಜಯನಗರ, ಬಳ್ಳಾರಿ, ಬೆಳಗಾವಿ, ಗದಗ, ಹಾವೇರಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ.
ರೈತ ಬಾಂಧವರು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಬಿಳಿ ಜೋಳ ಮಾರಾಟ ಮಾಡದೆ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಿ ಸರ್ಕಾರದ ಬೆಂಬಲ ಬೆಲೆ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್. ಪಾಟೀಲ್ ಕೋರಿದ್ದಾರೆ.
ಹೈಬ್ರಿಡ್ ಚೋಳ ಪ್ರತಿ ಕ್ವಿಂಟಲ್ ಗೆ 3371 ರೂ., ಮಾಲ್ಡಿಡೆ ಜೋಳ ಪ್ರತಿ ಕ್ವಿಂಟಲ್ ಗೆ 3421 ರೂ. ದರ ನಿಗದಿಪಡಿಸಲಾಗಿದೆ. ಪ್ರತಿ ಎಕರೆಗೆ 20 ಕ್ವಿಂಟಲ್, ಪ್ರತಿ ರೈತರಿಂದ 150 ಕ್ವಿಂಟಲ್ ಬಿಳಿ ಜೋಳ ಖರೀದಿಸಲಾಗುವುದು.
ಫ್ರೂಟ್ಸ್ ಐಡಿಯೊಂದಿಗೆ ಬಯೋಮೆಟ್ರಿಕ್ ನೀಡಿ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಸಬೇಕು. ಆಧಾರ್ ಜೋಡಣೆಯಾದ ಎನ್‌ಸಿಪಿಐ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಖಾತರಿಪಡಿಸಬೇಕು. ಎಫ್ಎಕ್ಯೂ ಗುಣಮಟ್ಟದ ಬಗ್ಗೆ ಗ್ರೇಡರ್ ಪರಿಶೀಲಿಸಿ ದೃಢೀಕರಿಸಿದ ನಂತರ ಖರೀದಿ ಮಾಡಲಾಗುವುದು. ಮಧ್ಯವರ್ತಿಗಳು ಖರೀದಿ ಕೇಂದ್ರಗಳನ್ನು ದುರ್ಬಳಕೆ ಮಾಡಿಕೊಂಡಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು.
ರೈತರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ನೇರವಾಗಿ ಹಣ ಪಾವತಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕಚೇರಿ ಸಮಯದಲ್ಲಿ ಉಚಿತ ದೂರವಾಣಿ ಸಂಖ್ಯೆ 1800 425 1552 ಕರೆ ಮಾಡಬಹುದಾಗಿದೆ.