
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ನಿವೇಶನ ಹಂಚಿಕೆ ಹಗರಣ ಹೊಸ ತಿರುವು ಪಡೆದುಕೊಂಡಿದೆ.
ನಿವೃತ್ತ ಐಎಎಸ್ ಅಧಿಕಾರಿ, ಹಾಲಿ ಕಾಂಗ್ರೆಸ್ ಸಂಸದ ಕುಮಾರನಾಯಕ್ ಸೇರಿದಂತೆ ನಾಲ್ವರು ಸರ್ಕಾರಿ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ ಆರೋಪ ಕೇಳಿ ಬಂದಿದೆ. ಇವರಲ್ಲಿ ಮೂವರು ನಿವೃತ್ತರಾಗಿದ್ದಾರೆ. ಕುಮಾರನಾಯಕ್, ಮೈಸೂರು ತಾಲೂಕು ಹಿಂದಿನ ನಿವೃತ್ತ ತಹಶೀಲ್ದಾರ್ ಮಾಳಿಗೆ ಶಂಕರ್, ನಿವೃತ್ತ ಕಂದಾಯ ನಿರೀಕ್ಷಕ ಸಿದ್ದಪ್ಪಾಜಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಕಚೇರಿಯ ಭೂಮಾಪಕ ಶಂಕರಪ್ಪ ವಿರುದ್ಧ ಶಿಸ್ತು ಕ್ರಮಕ್ಕೆ ಮೈಸೂರು ಲೋಕಾಯುಕ್ತ ಎಸ್ಪಿ ಟಿ.ಜೆ. ಉದೇಶ್ ಶಿಫಾರಸು ಮಾಡಿದ್ದಾರೆ.
ಹೈಕೋರ್ಟ್ ಸೂಚನೆ ಮೇರೆಗೆ ಮುಡಾ ನಿವೇಶನ ಅಕ್ರಮ ಹಂಚಿಕೆ ಪ್ರಕರಣ ಸಂಬಂಧ ಮೈಸೂರು ಲೋಕಾಯುಕ್ತ ಎಸ್ಪಿ ಉದೇಶ್ ನೇತೃತ್ವದ ತಂಡ ತನಿಖೆ ನಡೆಸಿದೆ. ಫೆಬ್ರವರಿ 22ರಂದು 82ನೇ ಸಿಸಿಹೆಚ್ ಜನಪ್ರತಿನಿಧಿಗಳ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರ ಪೀಠಕ್ಕೆ ಬಿ ರಿಪೋರ್ಟ್ ಸಲ್ಲಿಸಲಾಗಿದೆ.
ನಿವೇಶನ ಹಂಚಿಕೆ ಮತ್ತು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಲೋಪ ಇರುವುದು ಕಂಡು ಬಂದಿದೆ. ಮಲ್ಲಿಕಾರ್ಜುನ ಸ್ವಾಮಿಯ ಅರ್ಜಿಯ ಮೇರೆಗೆ ಮೈಸೂರು ತಾಲೂಕು ಕೆಸರೆ ಗ್ರಾಮದ ಸರ್ವೆ ನಂಬರ್ 464ರ 3 ಎಕರೆ 16 ಗುಂಟೆ ಜಮೀನಿನಲ್ಲಿ ಮುಡಾ ಅಭಿವೃದ್ಧಿ ಕಾರ್ಯ ಕೈಗೊಂಡಿತ್ತು. ಅಂದಿನ ಜಿಲ್ಲಾಧಿಕಾರಿ ಕುಮಾರನಾಯಕ್, ತಹಶೀಲ್ದಾರ್ ಮಾಳಿಗೆ ಶಂಕರ್, ರವಿನ್ಯೂ ಇನ್ಸ್ಪೆಕ್ಟರ್ ಸಿದ್ದಪ್ಪಾಜಿ, ಸರ್ವೆಯರ್ ಶಂಕರಪ್ಪ ಭೇಟಿ ನೀಡದೆ ಸ್ಥಳ ತನಿಖಾ ವರದಿ ನಕ್ಷೇ ತಯಾರಿಸಿ ಅನ್ಯಕ್ರಾಂತ ಆದೇಶ ಹೊರಡಿಸಿದ್ದರು ಎಂದು ಹೇಳಲಾಗಿದೆ.