
ಬೆಂಗಳೂರು: ಫೆಬ್ರವರಿ –ಮಾರ್ಚ್ ನಲ್ಲಿ ಬಿಸಿಲ ತಾಪಮಾನ ಹೆಚ್ಚಾಗಲಿದೆ. ವಾಡಿಕೆಗಿಂತ 2.5 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಾಗಿರುತ್ತದೆ. ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಪ್ರಕೃತಿ ವಿಕೋಪ ಸಂಬಂಧ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಪ್ರಸ್ತುತ ಸಾಲಿನ ಹಿಂಗಾರು, ಮುಂಗಾರು ಮಳೆ ಸ್ಥಿತಿ, ಕುಡಿಯುವ ನೀರು, ಹವಾಮಾನ ಹಾಗೂ ಅಣೆಕಟ್ಟೆಗಳಲ್ಲಿನ ನೀರಿನ ಮಟ್ಟದ ಬಗ್ಗೆ ಚರ್ಚೆ ನಡೆಸಲಾಗಿದೆ.
ಏಪ್ರಿಲ್, ಮೇ ನಲ್ಲಿ ಉತ್ತಮ ಮಳೆ ಆಗಲಿದೆ. ಮಾರ್ಚ್ ಕೊನೆಯ ವಾರದಲ್ಲಿಯೂ ಹೆಚ್ಚು ಮಳೆ ಆಗುವ ಸಾಧ್ಯತೆ ಇದೆ. ಹಿಂಗಾರಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ. ಅಕ್ಟೋಬರ್, ನವೆಂಬರ್, ಡಿಸೆಂಬರ್ ನಲ್ಲಿ ಮಳೆಯ ಪ್ರಮಾಣ ಇಳಿಮುಖವಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಬೇಸಿಗೆಯಲ್ಲಿ ರಾಜ್ಯದ ಯಾವ ಭಾಗದಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಕೃಷ್ಣ ಬೈರೇಗೌಡ ಸೂಚಿಸಿದ್ದಾರೆ.
ರಾಜ್ಯದಲ್ಲಿ ಎದುರಾಗುವ ಬರ, ಪ್ರವಾಹ ಮತ್ತು ಇತರ ವಿಕೋಪಗಳಿಂದ ಉಂಟಾಗುವ ಪರಿಣಾಮಗಳನ್ನು ಪರಿಶೀಲಿಸಿ, ತಕ್ಷಣದ ಹಾಗೂ ದೀರ್ಘಕಾಲೀನ ಪರಿಹಾರ ಕ್ರಮಗಳನ್ನು ರೂಪಿಸುವ ಕುರಿತಾಗಿ ಸಭೆಯಲ್ಲಿ ಮಹತ್ವದ ತೀರ್ಮಾನಗಳನ್ನ ಕೈಗೊಳ್ಳಲಾಯಿತು.
ರಾಜ್ಯದ ಜಲಾಶಯಗಳಲ್ಲಿರುವ ನೀರಿನ ಪ್ರಮಾಣ, ಅದರ ಪರಿಣಾಮಕಾರಿಯಾದ ಬಳಕೆ, ಕೃಷಿಕರು ಮತ್ತು ಕುಡಿಯುವ ನೀರಿಗಾಗಿ ಬೇಸಿಗೆಗಿಂತ ಮುಂಚೆಯೇ ಅಗತ್ಯ ಕ್ರಮಗಳನ್ನ ತೆಗೆದುಕೊಳ್ಳುವ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.
ಸಚಿವರಾದ ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ಚಲುವರಾಯಸ್ವಾಮಿ ಉಪಸ್ಥಿತರಿದ್ದರು.