
ಕಾರವಾರ: ಮುಂಡಗೋಡ ಪಟ್ಟಣದ ತಾಲೂಕು ಆಡಳಿತಸೌಧದಲ್ಲಿ ಸಾರ್ವಜನಿಕರ ಎದುರಲ್ಲೇ ಕಂದಾಯ ನಿರೀಕ್ಷಕ, ಉಪ ತಹಶೀಲ್ದಾರ್ ಹೊಡೆದಾಡಿಕೊಂಡಿದ್ದಾರೆ.
ದಾಖಲೆಗಳ ಪರಿಶೀಲನೆ ವಿಷಯವಾಗಿ ಕಂದಾಯ ನಿರೀಕ್ಷಕ ವಿಕ್ರಂ ಸಿಂಗ್ ರಜಪೂತ್ ಮತ್ತು ಉಪ ತಹಶೀಲ್ದಾರ್ ಜಿ.ಬಿ. ಭಟ್ ನಡುವೆ ಮಾರಾಮಾರಿ ನಡೆದಿದೆ. ಸಾರ್ವಜನಿಕರಿಗೆ ನೀಡುವ ಪ್ರಮಾಣ ಪತ್ರಗಳ ವಿತರಣೆಗೆ ಮೊದಲು ಗ್ರಾಮ ಆಡಳಿತ ಅಧಿಕಾರಿ ಹಾಗೂ ಕಂದಾಯ ನಿರೀಕ್ಷಕರು ದಾಖಲೆಗಳ ಪರಿಶೀಲಿಸಿ ತಹಶೀಲ್ದಾರ್ ಕಚೇರಿಗೆ ವರದಿ ಕಳುಹಿಸಬೇಕು.
ಆದರೆ, ರಜಪೂತ್ ಅವರು ಸರಿಯಾಗಿ ಪರಿಶೀಲನಾ ವರದಿ ನೀಡುತ್ತಿಲ್ಲ ಎನ್ನಲಾಗಿದೆ. ಈ ಬಗ್ಗೆ ಜಿ.ಬಿ. ಭಟ್ ಅವರು ಫೋನ್ ಮಾಡಿ ವಿಚಾರಿಸಿದ್ದಾರೆ. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಅವಾಚ್ಯವಾಗಿ ಬೈದಾಡಿಕೊಂಡಿದ್ದಾರೆ. ನಂತ ಆಕ್ರೋಶದಿಂದ ತಹಶೀಲ್ದಾರ್ ಕಚೇರಿಗೆ ಬಂದ ರಜಪೂತ್ ಅವರು ಏರು ಧ್ವನಿಯಲ್ಲಿ ಭಟ್ ಅವರೊಂದಿಗೆ ಜಗಳವಾಡಿದ್ದು, ಈ ಬೆಳೆ ಇಬ್ಬರ ನಡುವೆ ಮಾರಾಮಾರಿ ನಡೆದಿದೆ ಎನ್ನಲಾಗಿದೆ.