ರೋಹಿಂಗ್ಯಾ ನಿರಾಶ್ರಿತ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿಕೊಳ್ಳದಂತೆ ದೆಹಲಿ ಸರ್ಕಾರ ಡಿಸೆಂಬರ್ 2024 ರಲ್ಲಿ ಹೊರಡಿಸಿದ್ದ ಸುತ್ತೋಲೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ ನಡೆಸಿದ್ದು, ಈ ಸಂದರ್ಭದಲ್ಲಿ, “ಶಿಕ್ಷಣದ ವಿಷಯದಲ್ಲಿ ಯಾವುದೇ ತಾರತಮ್ಯದ ಪ್ರಶ್ನೆ ಉದ್ಭವಿಸುವುದಿಲ್ಲ” ಎಂದು ನ್ಯಾಯಪೀಠ ಹೇಳಿದೆ.
“ಪ್ರತಿಯೊಂದು ಮಗುವಿಗೂ ಶಿಕ್ಷಣದ ಹಕ್ಕಿದೆ” ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ ಸ್ಪಷ್ಟಪಡಿಸಿದ್ದು, ಆದರೆ ಅರ್ಜಿದಾರರಾದ ರೋಹಿಂಗ್ಯಾ ಮಾನವ ಹಕ್ಕುಗಳ ಉಪಕ್ರಮದ ಹಿರಿಯ ವಕೀಲರು ನ್ಯಾಯಾಲಯದ ನಿರ್ದೇಶನದಂತೆ ಸಲ್ಲಿಸಿದ್ದ ಅಫಿಡವಿಟ್ ಬಗ್ಗೆ ಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಏಕೆಂದರೆ, ಆ ಅಫಿಡವಿಟ್‌ನಲ್ಲಿ ಕೇವಲ ಮಕ್ಕಳ ಪಟ್ಟಿಯನ್ನು ನೀಡಲಾಗಿತ್ತು, ಪೋಷಕರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ.
“ನೀವು ನೀಡಿರುವುದು ಮಕ್ಕಳ ಪಟ್ಟಿ. ಮಕ್ಕಳನ್ನು ಮರೆತುಬಿಡಿ. ಮೊದಲು ನಮಗೆ ಪೋಷಕರ ಪಟ್ಟಿ ಬೇಕು. ಅವರು ಹೇಗೆ ವಾಸಿಸುತ್ತಿದ್ದಾರೆ, ಎಲ್ಲಿ ವಾಸಿಸುತ್ತಿದ್ದಾರೆ, ಯಾರು ವಾಸಿಸಲು ಅನುಮತಿ ನೀಡಿದ್ದಾರೆ ಎಂಬ ಬಗ್ಗೆ ತಿಳಿಸಿ. ಅವರು ಕೊಠಡಿಗಳಲ್ಲಿ ವಾಸಿಸುತ್ತಿದ್ದರೆ, ಅದರ ಮಾಲೀಕರು ಯಾರು ಎಂದು ಹೇಳಿ. ಕುಟುಂಬಗಳ ಪಟ್ಟಿಯನ್ನು ಕಾಲೋನಿವಾರು ನೀಡಿ. ಏನು ಮಾಡಬಹುದು ಎಂದು ನೋಡೋಣ. ಶಿಕ್ಷಣದ ವಿಷಯದಲ್ಲಿ ತಾರತಮ್ಯವಿಲ್ಲ. ಪ್ರತಿಯೊಂದು ಮಗುವಿಗೂ ಶಿಕ್ಷಣದ ಹಕ್ಕಿದೆ” ಎಂದು ನ್ಯಾಯಪೀಠ ಹೇಳಿದೆ.
ವಕೀಲ ಸತ್ಯ ಮಿತ್ರ ಮೂಲಕ ಸಲ್ಲಿಸಲಾದ ಪಿಐಎಲ್‌ನಲ್ಲಿ, ರೋಹಿಂಗ್ಯಾ ನಿರಾಶ್ರಿತ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿಕೊಳ್ಳದಂತೆ ದೆಹಲಿಯ ಎಎಪಿ ಸರ್ಕಾರವು ಡಿಸೆಂಬರ್ 23, 2024 ರಂದು ಹೊರಡಿಸಿದ್ದ ಸುತ್ತೋಲೆಯನ್ನು ರದ್ದುಗೊಳಿಸುವಂತೆ ಕೋರಲಾಗಿದೆ.
ಆಧಾರ್ ಕಾರ್ಡ್ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಲೆಕ್ಕಿಸದೆ ಎಲ್ಲಾ ರೋಹಿಂಗ್ಯಾ ಮಕ್ಕಳಿಗೆ ಉಚಿತವಾಗಿ ಪ್ರವೇಶ ನೀಡುವಂತೆ ಮತ್ತು ಆಧಾರ್ ಕಾರ್ಡ್ ಬಗ್ಗೆ ಸರ್ಕಾರದ ಒತ್ತಾಯವಿಲ್ಲದೆ 10 ನೇ, 12 ನೇ ಮತ್ತು ಪದವಿ ಸೇರಿದಂತೆ ಎಲ್ಲಾ ಪರೀಕ್ಷೆಗಳಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಪಿಐಎಲ್‌ನಲ್ಲಿ ನಿರ್ದೇಶನ ಕೋರಲಾಗಿದೆ.
ದೆಹಲಿ ಸರ್ಕಾರದ ಸುತ್ತೋಲೆಯಲ್ಲಿ ಪ್ರವೇಶ ಪ್ರಕ್ರಿಯೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮತ್ತು ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ದಾಖಲಿಸುವುದನ್ನು ತಡೆಯಲು ವಿದ್ಯಾರ್ಥಿಗಳ ದಾಖಲೆಗಳನ್ನು ಪರಿಶೀಲಿಸುವಂತೆ ಕೋರಲಾಗಿತ್ತು. ಈ ಸುತ್ತೋಲೆಯು ರೋಹಿಂಗ್ಯಾ ನಿರಾಶ್ರಿತ ಮಕ್ಕಳನ್ನು ಪ್ರವೇಶದಿಂದ ವಂಚಿತರನ್ನಾಗಿ ಮಾಡುತ್ತದೆ ಎಂದು ಎನ್‌ಜಿಒ ಪರ ವಕೀಲರು ವಾದಿಸಿದ್ದರು. ದೆಹಲಿಯಲ್ಲಿ 1,050 ರೋಹಿಂಗ್ಯಾ ನಿರಾಶ್ರಿತರಿದ್ದಾರೆ ಮತ್ತು ಅವರು ಹೆಚ್ಚಾಗಿ ಶಾಹೀನ್‌ಬಾಗ್, ಕಾಲಿಂಡಿ ಕುಂಜ್, ಖೌರಿ ಖಾಸ್‌ನಂತಹ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿದ್ದಾರೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು.