ಅಮೆರಿಕದ ಕೊಲೊರಾಡೊ ರಾಜ್ಯದಲ್ಲಿ, ಗೆಳೆಯ ತನ್ನ ಉದ್ಯೋಗಾವಕಾಶಗಳ ಬಗ್ಗೆ ನಂಬಿಕೆ ವ್ಯಕ್ತಪಡಿಸದ ಕಾರಣ ಯುವತಿಯೊಬ್ಬಳು ಆತನನ್ನು ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಆಶ್ಲೇ ವೈಟ್ ಎಂಬ ಯುವತಿ ತನ್ನ ಗೆಳೆಯ ಕೋಡಿ ಡಿಲಿಸಾ ನನ್ನು ಕೊಲೆಗೈದ ಆರೋಪದ ಮೇಲೆ ಅಪರಾಧಿ ಎಂದು ಸಾಬೀತಾಗಿದ್ದಾಳೆ. ಆಕೆಯನ್ನು ದ್ವಿತೀಯ ದರ್ಜೆಯ ಕೊಲೆ, ದ್ವಿತೀಯ ದರ್ಜೆಯ ಕೊಲೆಗೆ ಸಂಚು ಮತ್ತು ದರೋಡೆ ಆರೋಪಗಳ ಮೇಲೆ ತಪ್ಪಿತಸ್ಥೆ ಎಂದು ಗುರುತಿಸಲಾಗಿದೆ.
ನ್ಯಾಯಾಲಯದ ದಾಖಲೆಗಳ ಪ್ರಕಾರ, 29 ವರ್ಷದ ಆಶ್ಲೇ ವೈಟ್ 2020 ರಲ್ಲಿ ಡೆನ್ವರ್‌ನಿಂದ ಬಸ್‌ನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ, ಉದ್ಯೋಗ ಸಂದರ್ಶನದ ಬಗ್ಗೆ ಡಿಲಿಸಾಗೆ ಪಠ್ಯ ಸಂದೇಶ ಕಳುಹಿಸಿದ್ದಳು.
“ಅವರ ಸಂಭಾಷಣೆಯ ಸಮಯದಲ್ಲಿ, ಡಿಲಿಸಾ, ಅವಳು ಉದ್ಯೋಗ ಪಡೆಯುವ ಸಾಧ್ಯತೆಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದ, ಇದು ವೈಟ್‌ಗೆ ಕೋಪ ತರಿಸಿತ್ತು” ಎಂದು ಪ್ರಾಸಿಕ್ಯೂಟರ್‌ಗಳ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಬಸ್‌ನಲ್ಲಿರುವಾಗಲೇ ಕೋಪಗೊಂಡ ವೈಟ್, ತನ್ನನ್ನು “ಸ್ಕಾಟ್” ಎಂದು ಕರೆದುಕೊಂಡ ಸಂಪೂರ್ಣ ಅಪರಿಚಿತ ವ್ಯಕ್ತಿಯನ್ನು ಭೇಟಿಯಾಗಿದ್ದು, ಆಕೆ ತನ್ನ ಮನೆಯಿಂದ ಸ್ವಲ್ಪ ದೂರದಲ್ಲಿ ಬಸ್‌ನಿಂದ ಇಳಿದು ಸ್ಕಾಟ್‌ನ ಬಂದೂಕು ಪಡೆದುಕೊಂಡಿದ್ದಳು. ನಂತರ ವೈಟ್‌ನ ಮನೆಗೆ ನಡೆದುಕೊಂಡು ಹೋಗಿದ್ದು ಅಲ್ಲಿ ಸ್ಕಾಟ್, ವೈಟ್ ಸಹೋದರ ಎಂದು ಡಿಲಿಸಾಗೆ ತನ್ನನ್ನು ಪರಿಚಯಿಸಿಕೊಂಡಿದ್ದ.
“ಸ್ವಲ್ಪ ಸಮಯದ ನಂತರ, ಡಿಲಿಸಾನ ತಲೆಗೆ ಎರಡು ಬಾರಿ ಗುಂಡು ಹಾರಿಸಲಾಗಿದ್ದು, ಮರುದಿನ ಅವನ ದೇಹವು ಪತ್ತೆಯಾಗಿತ್ತು.
ಕೊಲೆಯ ನಂತರ, ಇಬ್ಬರೂ ಡಿಲಿಸಾನ ಬ್ಯಾಗ್ ಕದ್ದಿದ್ದು ಸ್ಕಾಟ್ ಹೊರಡುವ ಮೊದಲು ಕೆಲವು ದಿನಗಳ ಕಾಲ ಆ ಪ್ರದೇಶದಲ್ಲಿಯೇ ಇದ್ದ. ವೈಟ್ ಅವನನ್ನು ಮತ್ತೆ ಎಂದಿಗೂ ನೋಡಿರಲಿಲ್ಲ. ಆಕೆಯನ್ನು ನಂತರ ಶಂಕಿತೆ ಎಂದು ಗುರುತಿಸಲಾಗಿದ್ದು, ಡಿಲಿಸಾನ ಸಾವಿಗೆ ಕಾರಣವಾದ ಘಟನೆಗಳ ಬಗ್ಗೆ ವಿವರವಾದ ವಿವರಣೆಯನ್ನು ನೀಡಿದ್ದಳು. ಸಾಕ್ಷ್ಯದ ಆಧಾರದ ಮೇಲೆ, ಅವಳನ್ನು ಬಂಧಿಸಲಾಗಿತ್ತು.
ವೈಟ್ ಅಪರಾಧಿ ಎಂದು ಸಾಬೀತಾಗಿದ್ದರೂ, ಆಡಮ್ಸ್ ಕೌಂಟಿ ಡಿಸ್ಟ್ರಿಕ್ಟ್ ಕೋರ್ಟ್ ನ್ಯಾಯಾಧೀಶ ಜೆಫ್ರಿ ರಫ್ ಏಪ್ರಿಲ್ 4, 2025 ರಂದು ಶಿಕ್ಷೆ ವಿಧಿಸಲಿದ್ದಾರೆ.