ಬೆಂಗಳೂರು: ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ಹಿಂಸಿಸುತ್ತಿದ್ದ ಆರೋಪದಲ್ಲಿ ಕಾನ್ಸ್ ಟೇಬಲ್ ವಿರುದ್ಧ ಪ್ರಕರಣ ದಾಖಲಾಗಿದೆ.
ಇಂದಿರಾ ನಗರ ಠಾಣೆಯ ಕಾನ್ಸ್ ಟೇಬಲ್ ಮನೋಜ್ ವಿರುದ್ಧ ಪತ್ನಿ ರೇಖಾ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ. ಮನೋಜ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ರೇಖಾ ಅವರ ಮೊದಲ ಪತಿ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ವಿಚಾರಣೆ ವೇಳೆ ಪೊಲೀಸ್ ಠಾಣೆಗೆ ಬಂದು ಹೋಗುತ್ತಿದ್ದ ರೇಖಾ ಹಾಗೂ ಕಾನ್ಸ್ ಟೇಬಲ್ ಮನೋಜ್ ನಡುವೆ ಪರಿಚಯವಾಗಿ ಇಬ್ಬರು ಪರಸ್ಪರ ಪ್ರೀತಿಸಿ 2024ರಲ್ಲಿ ಇಬ್ಬರೂ ವಿವಾಹವಾಗಿದ್ದರು. ವೈಯ್ಯಾಲಿ ಕಾವಲ್ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೊಂದಣಿಯಾಗಿತ್ತು, ಇಬ್ಬರೂ ವಸಂತನಗರ ಪೊಲೀಸ್ ಕ್ವಾಟ್ರಸ್ ನಲ್ಲಿ ವಾಸವಾಗಿದ್ದರು.
ಮನೋಜ್ ಪತ್ನಿಗೆ ಸದಾ ವರದಕ್ಷಿಣೆ ಕಿರುಕುಳ ನೀಡುವುದು, ಮಾನಸಿಕ ಹಿಂಸೆ ನೀಡುವುದು ಮಾಡುತ್ತಿದ್ದ ಎನ್ನಲಾಗಿದೆ. ಈಗಾಗಲೇ ಎರಡು ಮಕ್ಕಳಿರುವ ನಿನ್ನನ್ನು ಮದುವೆಯಾಗುವ ಬದಲು ಬೇರೆಯವಳನ್ನು ಮದುವೆಯಾಗಿದ್ದರೆ ವರದಕ್ಷಿಣೆ ಸಿಗುತ್ತಿತ್ತು ಎಂದು ಬಾಯಿಗೆ ಬಂದಂತೆ ಮಾತನಾಡುವುದು, ದೈಹಿಕವಾಗಿ ಹಿಂಸೆ ನೀಡುವುದು ಮಾಡುತ್ತಿದ್ದನಂತೆ. ಈ ಹಿನ್ನೆಲೆಯಲ್ಲಿ ರೇಖಾ ದೂರು ದಾಖಲಿಸಿದ್ದು, ಮನೋಜ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಎಫ್ಐಆರ್ ಹಿನ್ನೆಲೆಯಲ್ಲಿ ಕಾನ್ಸ್ ಟೇಬಲ್ ಮನೋಜ್ ಗೆ ನೋಟಿಸ್ ಜಾರಿ ಮಾಡಲಾಗಿದೆ.