ಬೆಂಗಳೂರು: ‘ರಾಮಾಚಾರಿ’ ಧಾರಾವಾಹಿ ನಿರ್ದೇಶಕ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ನಿರ್ದೇಶಕ ಕೆ.ಎಸ್. ರಾಮ್ ಜೀ ದೂರು ನೀಡಿದ್ದಾರೆ.
ನಿರ್ದೇಶಕರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಪೋಸ್ಟ್ ಮಾಡಲಾಗಿದೆ. ನಕಲಿ ಖಾತೆಯಿಂದ ಪೋಸ್ಟ್ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಲಾಗಿದೆ.
ಜನವರಿ 24ರಂದು ನಕಲಿ ಇನ್ಸ್ಟಾಗ್ರಾಮ್ ಖಾತೆ ಕ್ರಿಯೇಟ್ ಆಗಿದೆ. ಪೇಜ್ ನಲ್ಲಿ ನಿರ್ದೇಶಕರ ಫೋಟೋ ಬಳಸಿಕೊಂಡು ಇಲ್ಲಸಲ್ಲದ ಆರೋಪ ಮಾಡಲಾಗಿದೆ. ಹೆಣ್ಣು ಮಕ್ಕಳಿಗೆ ನಿರ್ದೇಶಕರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಪೋಸ್ಟ್ ಹಾಕಲಾಗಿದೆ ಎನ್ನಲಾಗಿದ್ದು, ಅಪರಿಚಿತ ವ್ಯಕ್ತಿಯನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.
ತಮ್ಮ ಬೆಳವಣಿಗೆ ಸಹಿಸದೆ ಈ ರೀತಿ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬೆಂಗಳೂರಿನ ಪಶ್ಚಿಮ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ‘ರಾಮಾಚಾರಿ’, ‘ಮಂಗಳ ಗೌರಿ ಮದುವೆ’, ‘ನಾಗಿಣಿ 2’ ಸೇರಿದಂತೆ 16 ಧಾರಾವಾಹಿಗಳನ್ನು ಕೆ.ಎಸ್. ರಾಮ್ ಜೀ ನಿರ್ದೇಶನ ಮಾಡಿದ್ದಾರೆ.