ಬೆಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಮಾನೋತ್ಸವ ಅಂಗವಾಗಿ ಫೆಬ್ರವರಿ 15ರವರೆಗೆ ಅಟಲ್ ಸ್ಮೃತಿ ಸಂಕಲನ ಅಭಿಯಾನ ಕೈಗೊಳ್ಳಲಾಗಿದೆ.
ಮಾಜಿ ಡಿಸಿಎಂ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಸುದ್ದಿಗೋಷ್ಠಿಯಲ್ಲಿ ಬಗ್ಗೆ ಮಾಹಿತಿ ನೀಡಿದ್ದು, ಅಭಿಯಾನದ ಮಾದರಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನ, ಸಾಧನೆ, ಕೊಡುಗೆ, ಕೃತಿಗಳ ಸ್ಮರಣೆ ಮತ್ತು ಪ್ರದರ್ಶನವನ್ನು ಬಿಜೆಪಿ ಆಯೋಜಿಸಿದೆ ಎಂದು ತಿಳಿಸಿದ್ದಾರೆ.
ಮಾಜಿ ಶಾಸಕ ಡಾ.ಎ.ಹೆಚ್. ಶಿವಯೋಗಿ ಸ್ವಾಮಿ ನೇತೃತ್ವದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಒಂದು ತಂಡವನ್ನು ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಮಾನೋತ್ಸವ ವರ್ಷಾಚರಣೆಗೆ ರಚಿಸಿದ್ದಾರೆ. ಅದೇ ರೀತಿ ಜಿಲ್ಲಾ ಮಟ್ಟದಲ್ಲಿ ಐವರು ಮತ್ತು ಮಂಡಲ ಮಟ್ಟದಲ್ಲಿ ಮೂವರನ್ನು ಒಳಗೊಂಡ ತಂಡವು ಚಟುವಟಿಕೆಗಳನ್ನು ನಿರ್ವಹಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.
ಅಭಿಯಾನದ ಭಾಗವಾಗಿ ವಾಜಪೇಯಿ ಅವರು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಭಾಷಣಗಳು, ವಿವಿಧ ಜನರೊಂದಿಗೆ ನಡೆಸಿದ ಸಂವಾದದ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಫೆಬ್ರವರಿ 15 ರಿಂದ ಮಾರ್ಚ್ 15 ರವರೆಗೆ ಜಿಲ್ಲಾ ಮಟ್ಟದಲ್ಲಿ ಅಟಲ್ ವಿರಾಸತ್ ಸಮ್ಮೇಳನ ನಡೆಸಲಾಗುವುದು. ಅಟಲ್ ಜಿ ಅವರ ಪುಸ್ತಕ, ಸಾಹಿತ್ಯಗಳ ಪ್ರದರ್ಶನ, ಮಾರಾಟ, ಬರಹಗಾರರು, ಹಿರಿಯ ಕಾರ್ಯಕರ್ತರ ಸನ್ಮಾನ, ಅವರ ಕೊಡುಗೆಗಳ ಪ್ರದರ್ಶನ ನಡೆಯಲಿದೆ, ಅಟಲ್ ಅವರ ಹೋರಾಟದ ಹಾದಿಯಲ್ಲಿ ಬೆಳೆದು ಬಂದ ವ್ಯಕ್ತಿಗಳನ್ನು ಗೌರವಿಸಲಾಗುವುದು, ಯುವ ಪೀಳಿಗೆಗೆ ಅಪರೂಪದ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ಕೊಡುಗೆ ಸಾಧನೆ ಪರಿಚಯಿಸುವ ಪ್ರಯತ್ನ ಇದಾಗಿದ್ದು ಎಲ್ಲಾ ರೀತಿಯ ತಯಾರಿ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಡಾ. ಎ.ಹೆಚ್. ಶಿವಯೋಗಿ ಸ್ವಾಮಿ ಮಾತನಾಡಿ, ಅಟಲ್ ಬಿಹಾರಿ ವಾಜಪೇಯಿ ಅವರ ರಾಜ್ಯ ಪ್ರವಾಸ ಸಂಬಂಧ ಮಾಹಿತಿ, ಫೋಟೋ, ಸ್ಮರಣ ಫಲಕಗಳನ್ನು ಸಂಗ್ರಹಿಸಿ ಫೆಬ್ರವರಿ 14ರಂದು ಪ್ರದರ್ಶಿಸಲಾಗುವುದು ಎಂದು ತಿಳಿಸಿದ್ದಾರೆ.