ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಪಚೋರಾ ರೈಲು ನಿಲ್ದಾಣದಲ್ಲಿ ನಡೆದ ದುರಂತ ಘಟನೆಯಲ್ಲಿ, ಪುಷ್ಪಕ್ ಎಕ್ಸ್ ಪ್ರೆಸ್ ರೈಲಿನಲ್ಲಿನ ಎಚ್ಚರಿಕೆ ಸರಪಳಿ(ಎಸಿಪಿ) ಎಳೆದು ರೈಲಿನಿಂದ ಇಳಿಯಲು ಯತ್ನಿಸಿದ ನಂತರ 12 ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ. 35 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಕೆಲವು ಪ್ರಯಾಣಿಕರು ಪುಷ್ಪಕ್ ರೈಲಿನಲ್ಲಿ ಬೆಂಕಿಯ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿದಾಗ ಭಯಭೀತರಾಗಿದ್ದಾರೆ. ಇತರರು ಭಯದಿಂದ ಚಲಿಸುವ ರೈಲಿನಿಂದ ಜಿಗಿಯಲು ಪ್ರೇರೇಪಿಸಿದ್ದಾರೆ. ದುರಂತವೆಂದರೆ, ಅವರಲ್ಲಿ ಕೆಲವರು ಪಕ್ಕದ ಹಳಿಗೆ ಹಾರಿದ್ದು, ಅಲ್ಲಿ ಅದೇ ಸಮಯದಲ್ಲಿ ಹಾದುಹೋಗುತ್ತಿದ್ದ ಕರ್ನಾಟಕ ಎಕ್ಸ್ ಪ್ರೆಸ್ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ.
ಕೇಂದ್ರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ(ಸಿಪಿಆರ್‌ಒ) ಸ್ವಪ್ನಿಲ್ ನೀಲಾ ಅವರ ಪ್ರಕಾರ, ಕರ್ನಾಟಕ ಎಕ್ಸ್ ಪ್ರೆಸ್ ಕೆಲವು ಪ್ರಯಾಣಿಕರಿಗೆ ಡಿಕ್ಕಿ ಹೊಡೆದಿದೆ. ಗಾಯಗೊಂಡ ಪ್ರಯಾಣಿಕರಿಗೆ ಸಹಾಯ ಮಾಡಲು ಸ್ಥಳೀಯ ಅಧಿಕಾರಿಗಳು ಮತ್ತು ಹತ್ತಿರದ ಆಸ್ಪತ್ರೆಗಳನ್ನು ಸಂಪರ್ಕಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಪ್ರತಿಕ್ರಿಯಿಸಿ, ಜಲ್ಗಾಂವ್ ಜಿಲ್ಲೆಯ ಪಚೋರಾ ಬಳಿ ಕೆಲವು ಜನರು ಪ್ರಾಣ ಕಳೆದುಕೊಂಡ ದುರದೃಷ್ಟಕರ ಘಟನೆ ತುಂಬಾ ನೋವಿನಿಂದ ಕೂಡಿದೆ. ನನ್ನ ಸಹೋದ್ಯೋಗಿ ಸಚಿವ ಗಿರೀಶ್ ಮಹಾಜನ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ತಲುಪಿದ್ದಾರೆ ಎಂದು ತಿಳಿಸಿದ್ದಾರೆ.