ಬೆಳಗಾವಿ: ಬೇರೆ ಮಹಿಳೆಯೊಂದಿಗೆ ಓಡಿ ಹೋದ ಪತಿಗಾಗಿ ಗ್ರಾಮ ಪಂಚಾಯತಿ ಸದಸ್ಯೆ ಕಣ್ಣಿರಿಟ್ಟಿದ್ದು, ಪತಿಯನ್ನು ಹುಡುಕಿಕೊಡುವಂತೆ ಒತ್ತಾಯಿಸಿ ಬೆಳಗಾವಿ ತಾಲೂಕಿನ ಮಾರಿಹಾಳ ಪೊಲೀಸ್ ಠಾಣೆ ಎದುರು ಧರಣಿ ನಡೆಸಿದ್ದಾರೆ.
ಮಾರಿಹಾಳ ಗ್ರಾಮ ಪಂಚಾಯತಿ ಸದಸ್ಯ ವಾಣಿಶ್ರೀ ಪತಿ ಬಸವರಾಜ ಸೀತಾಮನಿ ಬೇರೆ ಮಹಿಳೆಯೊಂದಿಗೆ ಪರಾರಿಯಾಗಿದ್ದಾರೆ. 25 ದಿನಗಳ ಹಿಂದೆ ವಿವಾಹಿತ ಮಹಿಳೆ ಮಾಸಾಬಿ ಜೊತೆಗೆ ಓಡಿಹೋಗಿದ್ದು, ಮಾರಿಹಾಳ ಠಾಣೆಗೆ ದೂರು ನೀಡಲು ಬಂದರೆ ಪೊಲೀಸರು ಸ್ಪಂದಿಸಿಲ್ಲ. ಪೊಲೀಸರು ಸುಳ್ಳು ಹೇಳುತ್ತಿದ್ದಾರೆ ಎಂದು ವಾಣೀಶ್ರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನ್ನ ಜೀವನ ಹಾಳು ಮಾಡಿ ಬೇರೆಯ ಮಹಿಳೆಯ ಜೊತೆಗೆ ಪತಿ ಇರಲು ನಾನು ಬಿಡುವುದಿಲ್ಲ. ನನಗೆ ಪತಿ, ಮಕ್ಕಳು ಬೇಕೆಂದು ಗ್ರಾಮ ಪಂಚಾಯಿತಿ ಸದಸ್ಯೆ ವಾಣಿಶ್ರೀ ಪಟ್ಟು ಹಿಡಿದಿದ್ದಾರೆ. ಆಕೆ ಗಂಡನನ್ನು ಬಿಟ್ಟು ನಿಂತಿದ್ದಾಳೆ ಎಂದು ನಾನು ಹಾಗೆಯೇ ನಿಲ್ಲಬೇಕಾ ಎಂದು ಪ್ರಶ್ನಿಸಿದ್ದಾರೆ.
ಮಾಸಾಬಿ ನಿನ್ನೆ ಕರೆ ಮಾಡಿ ನನ್ನ ಪತಿ ಬಸವರಾಜ ಸೀತಾಮನಿಯನ್ನು ಬಿಟ್ಟು ಕೊಡುವುದಿಲ್ಲ ಎಂದು ಹೇಳಿದ್ದಾಳೆ. ಪೊಲೀಸರೇ ನನಗೆ ನ್ಯಾಯ ಕೊಡಿಸಬೇಕೆಂದು ವಾಣಿಶ್ರೀ ಒತ್ತಾಯಿಸಿದ್ದಾರೆ. ಎರಡು ದಿನಗಳ ಹಿಂದೆ ಬಾಗೇವಾಡಿ ಠಾಣೆಗೆ ಹಾಜರಾಗಿದ್ದ ಬಸವರಾಜ ಸೀತಾಮನಿ ಬಿಟ್ಟು ಮಾಸಾಬಿ ಒಬ್ಬರೇ ಬಂದಿದ್ದರು. ಮಾಸಾಬಿಯನ್ನು ಕರೆತಂದ ಪೊಲೀಸರು ನನ್ನ ಪತಿ ಕರೆತಂದಿಲ್ಲವೆಂದು ವಾಣಿಶ್ರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸವರಾಜ ಮತ್ತು ಮಾಸಾಬಿ ಪರಾರಿಯಾಗಿದ್ದರಿಂದ ಎರಡು ಕುಟುಂಬಗಳು ಕಂಗಾಲಾಗಿವೆ. ನ್ಯಾಯಕ್ಕಾಗಿ ಬಸವರಾಜನ ಪತ್ನಿ ವಾಣಿಶ್ರೀ ಠಾಣೆಗೆ ಅಲೆಯುತ್ತಿದ್ದಾರೆ.