alex Certify ಕೇವಲ 20 ಸಾವಿರ ರೂ.ಗಳಲ್ಲಿ ಉತ್ತರ ಭಾರತ ಪ್ರವಾಸ: ಎಂಎಸ್‌ ಐಎಲ್‌ ಟೂರ್‌ ಪ್ಯಾಕೇಜ್‌ ಗೆ ಚಾಲನೆ: ಟೂರ್ ಪ್ಯಾಕೇಜ್ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ 20 ಸಾವಿರ ರೂ.ಗಳಲ್ಲಿ ಉತ್ತರ ಭಾರತ ಪ್ರವಾಸ: ಎಂಎಸ್‌ ಐಎಲ್‌ ಟೂರ್‌ ಪ್ಯಾಕೇಜ್‌ ಗೆ ಚಾಲನೆ: ಟೂರ್ ಪ್ಯಾಕೇಜ್ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು: ಅತ್ಯಂತ ಕಡಿಮೆ ದರದಲ್ಲಿ ಉತ್ತರ ಭಾರತ ಪ್ರವಾಸ ಟೂರ್ ಪ್ಯಾಕೇಜ್ ಗೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಚಾಲನೆ ನೀಡಿದ್ದಾರೆ.

ಮಧ್ಯಮ ಮತ್ತು ಕೆಳಮಧ್ಯಮ ವರ್ಗದವರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮತ್ತು ಸರಕಾರಿ ನೌಕರರನ್ನು ಗಮನದಲ್ಲಿಟ್ಟುಕೊಂಡು ಸರಕಾರಿ ಸ್ವಾಮ್ಯದ ಎಂಎಸ್‌ ಐಎಲ್‌ ಸಂಸ್ಥೆ ವಿವಿಧ ಆಕರ್ಷಕ ಟೂರ್‌ ಪ್ಯಾಕೇಜುಗಳನ್ನು ಆರಂಭಿಸಿದ್ದು, ಈ ಟೂರ್ ಪ್ಯಾಕೇಜ್ ಗಳಿಗೆ ಸಚಿವರು ಚಾಲನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಎಂಎಸ್‌ ಐಎಲ್‌ ಮೊದಲಿನಿಂದಲೂ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಗೆ ಹೆಸರಾಗಿದೆ. ಈಗ ಟೂರ್‌ ಪ್ಯಾಕೇಜುಗಳ ಮೂಲಕ ಸಂಸ್ಥೆಯು ಜನರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಈ ಪ್ಯಾಕೇಜುಗಳ ಅಡಿಯಲ್ಲಿ‌ ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಆದಿಕೈಲಾಸ ಮತ್ತು ವಾರಣಾಸಿಗೆ ಪ್ರವಾಸ ಆಯೋಜಿಸಲಾಗುವುದು. ಮುಖ್ಯವಾಗಿ ನಾವು ಆಫ್-ಲೈನ್‌ ಪ್ರವಾಸಿಗರಿಗೆ ಆದ್ಯತೆ ಕೊಡುತ್ತಿದ್ದೇವೆ ಎಂದರು.

ಈ ಪ್ಯಾಕೇಜುಗಳಲ್ಲಿ ಸುರಕ್ಷತೆ, ಶುಚಿರುಚಿಯಾದ ಆಹಾರ, ಮನೆ ಬಾಗಿಲಿನಿಂದಲೇ ಕರೆದುಕೊಂಡು ಹೋಗಿ ವಾಪಸ್‌ ಅಲ್ಲಿಗೇ ಬಿಡುವುದು, ಸಹಾಯಕರ ನೆರವು, ಮಾಸಿಕ ಕಂತುಗಳಲ್ಲಿ ಹಣ ಪಾವತಿ, ಲಕ್ಕಿ ಡ್ರಾ, ಕೈಗೆಟುಕುವ ವೆಚ್ಚದಲ್ಲಿ ಉತ್ತರ ಭಾರತ ಪ್ರವಾಸ ಮುಂತಾದ ಸೌಲಭ್ಯ ಮತ್ತು ಆಕರ್ಷಣೆಗಳಿವೆ. ಗುಂಪು ಪ್ರವಾಸ ಮಾಡಲು ಬಯಸುವವರಿಗೆ ಪ್ರತಿ ಬ್ಯಾಚಿನಲ್ಲಿ ಗರಿಷ್ಠ 100 ಮಂದಿಗೆ ಅವಕಾಶ ಇರಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದಲ್ಲದೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆಂದು ʻಸ್ಟಡಿ-ಕಂ-ಪ್ಲೆಷರ್‌ ಟೂರ್)‌, ಇಕೋ ಟೂರಿಸಂ ಮತ್ತು ಕರಾವಳಿ ಪ್ರದೇಶಗಳ ವೀಕ್ಷಣೆ ಇರುವ ಕೋಸ್ಟಲ್‌ ಟೂರಿಸಂ ಮುಂತಾದ ಪ್ಯಾಕೇಜುಗಳನ್ನು ರೂಪಿಸಲು ಎಂಎಸ್‌ ಐಎಲ್‌ ಚಿಂತಿಸುತ್ತಿದೆ. ಸಂಸ್ಥೆಯು ಸದ್ಯಕ್ಕೆ ರೂಪಿಸಿರುವ ಪ್ಯಾಕೇಜಿನಲ್ಲಿ ಕೇವಲ 20 ಸಾವಿರ ರೂ. ವೆಚ್ಚದಲ್ಲಿ 15ರಿಂದ 18 ದಿನಗಳ ಉತ್ತರ ಭಾರತ ಪ್ರವಾಸ ಮಾಡಿಕೊಂಡು ಬರಬಹುದು ಎಂದು ವಿವರಿಸಿದರು.

ಸರಕಾರಿ ಉದ್ಯೋಗಿಗಳನ್ನು ಗಮನದಲ್ಲಿ ಇಟ್ಟುಕೊಂಡು ಮಾಡಿರುವ ಪ್ಯಾಕೇಜಿನಲ್ಲಿ ಮೊದಲು ಶೇ.50ರಷ್ಟು ಹಣ ಪಾವತಿಸಿ, ಪ್ರವಾಸ ಕೈಗೊಳ್ಳಬಹುದು. ಪ್ರವಾಸ ಮುಗಿಸಿಕೊಂಡು ಬಂದ ಬಳಿಕ ಉಳಿದ ಶೇ.50ರಷ್ಟು ಹಣವನ್ನು ಮಾಸಿಕ ಕಂತುಗಳಲ್ಲಿ ಕಟ್ಟಬಹುದು. ಹಾಗೆಯೇ ಲಕ್ಕಿ ಡ್ರಾದಲ್ಲಿ ವಿಜೇತರಾಗುವ ಅದೃಷ್ಟಶಾಲಿಗಳು ಡ್ರಾ ನಂತರದ ಹಣವನ್ನು ಪಾವತಿಸಬೇಕಾಗಿಲ್ಲ. ಈ ಎಲ್ಲ ಪ್ಯಾಕೇಜುಗಳಲ್ಲೂ ಎಂಎಸ್‌ ಐಎಲ್‌ ವತಿಯಿಂದ ಟೂರ್‌ ಮ್ಯಾನೇಜರ್‌ ಅಥವಾ ಸಹಾಯಕರೊಬ್ಬರು ಜತೆಗಿರಲಿದ್ದು, ಪ್ರವಾಸಿಗರ ಬೇಕು-ಬೇಡಗಳನ್ನು ಆಲಿಸಿ, ನೆರವು ನೀಡಲಿದ್ದಾರೆ.

ಪ್ರವಾಸಿಗರಿಗೆ ಆದಷ್ಟು ಕಡಿಮೆ ವೆಚ್ಚದಲ್ಲಿ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ ಸಾಧ್ಯವಾಗಬೇಕು ಎನ್ನುವ ಆಶಯದೊಂದಿಗೆ ಎಂಎಸ್‌ ಐಎಲ್‌ ಮೂಲಕ ಈ ಹೆಜ್ಜೆ ಇಡಲಾಗುತ್ತಿದೆ. ಖಾಸಗಿ ಸಂಸ್ಥೆಗಳ ದರಕ್ಕೆ ಹೋಲಿಸಿದರೆ ನಾವು ನಿಗದಿ ಪಡಿಸಿರುವ ದರ ತುಂಬಾ ಕಡಿಮೆ ಇದೆ. ಹಾಗೆಯೇ ಪ್ರತಿಯೊಂದು ಸೇವೆಯನ್ನೂ ಗುಣಮಟ್ಟದೊಂದಿಗೆ ಒದಗಿಸಲಾಗುವುದು ಎಂದರು.

ಎಲ್ಲೆಲ್ಲಿಗೆ ಪ್ರವಾಸ?:

ಎಂಎಸ್‌ ಐಎಲ್‌ ಸಂಸ್ಥೆಯ ಟೂರ್ಸ್‌ ಅಂಡ್‌ ಟ್ರಾವೆಲ್ಸ್‌ ವಿಭಾಗವು ಈ ಟೂರ್‌ ಪ್ಯಾಕೇಜುಗಳನ್ನು ನಿರ್ವಹಿಸಲಿದೆ. ಇದರಡಿಯಲ್ಲಿ ಕಾಶಿ, ಅಯೋಧ್ಯೆ, ಪುರಿ, ಆದಿ ಕೈಲಾಸ ಮುಂತಾದ ಧಾರ್ಮಿಕ ಮತ್ತು ಐತಿಹಾಸಿಕ ತಾಣಗಳಿಗೆ ಪ್ರವಾಸಿಗರನ್ನು ಅದು ಕರೆದೊಯ್ಯಲಿದೆ. ಜೊತೆಗೆ ದುಬೈ, ಸಿಂಗಪುರ್‌, ವಿಯಟ್ನಾಂ, ಶ್ರೀಲಂಕಾ, ನೇಪಾಳ, ಥಾಯ್ಲೆಂಡ್‌ ಮತ್ತು ಯೂರೋಪಿನ ಹಲವು ದೇಶಗಳಿಗೂ ಎಂಎಸ್‌ ಐಎಲ್‌ ಟೂರ್‌ ಪ್ಯಾಕೇಜುಗಳನ್ನು ರೂಪಿಸಿದೆ.

24/7 ಸಹಾಯವಾಣಿ ಸೌಲಭ್ಯ:

ಪ್ರವಾಸಿಗರ ಅನುಕೂಲಕ್ಕೆ ಎಂಎಸ್‌ ಐಎಲ್‌ 24/7 ಸಹಾಯವಾಣಿ ಮತ್ತು ವಾಟ್ಸ್ಯಾಪ್‌ ಸೌಲಭ್ಯವನ್ನೂ (080-45888882, 9353645921) ಹೊಂದಿದೆ. ಇದರ ನಿರ್ವಹಣೆಗಾಗಿ ಪ್ರತ್ಯೇಕ ತಂಡವೇ ಇರಲಿದೆ. ಒಂದು ನಂಬರಿನಲ್ಲಿ ಯಾರಾದರೂ ಮಾತನಾಡುತ್ತಿದ್ದರೆ, ಅದು ತಾನಾಗಿಯೇ ಮತ್ತೊಂದು ಸಂಖ್ಯೆಗೆ ಸಂಪರ್ಕ ಕಲ್ಪಿಸುವ ಕ್ಲೌಡ್‌ ಬೇಸ್ಡ್‌ ಟೆಲಿಕಾಂ ಸಿಸ್ಟಮ್‌ ಅನ್ನು ಅಳವಡಿಸಿಕೊಳ್ಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...