ಮಂಗಳೂರು: ಇ.ಡಿ. ಅಧಿಕಾರಿಗಳ ಸೋಗಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲ ಬೋಳಂತೂರಿನ ನಾರ್ಶದಲ್ಲಿ ಉದ್ಯಮಿ ಮನೆಯಿಂದ 30 ಲಕ್ಷ ರೂಪಾಯಿ ದರೋಡೆ ಮಾಡಿದ ಆರೋಪಿಗಳ ಬಂಧನಕ್ಕೆ ಪೊಲೀಸ್ ಇಲಾಖೆ 4 ತಂಡಗಳನ್ನು ರಚಿಸಿದೆ.
ಶುಕ್ರವಾರ ರಾತ್ರಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಇ.ಡಿ. ಅಧಿಕಾರಿಗಳ ಸೋಗಿನಲ್ಲಿ 30 ಲಕ್ಷ ರೂಪಾಯಿ ದರೋಡೆ ಮಾಡಿದ್ದಾರೆ. ಈಗಾಗಲೇ ಪೊಲೀಸ್ ಇಲಾಖೆ ಪ್ರಕರಣದ ತನಿಖೆ ಕೈಗೊಂಡಿದ್ದು, ವಿಶೇಷ ತಂಡಗಳನ್ನು ರಚಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದೆ.
ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಯತೀಶ್ ಎನ್. ಅವರ ಮಾರ್ಗದರ್ಶನದಲ್ಲಿ ನಾಲ್ಕು ತಂಡಗಳು ತನಿಖೆ ಕೈಗೊಂಡಿದ್ದು, ತಾಂತ್ರಿಕ ತಂಡದಿಂದಲೂ ಮಾಹಿತಿ ಕಲೆ ಹಾಕಲಾಗಿದೆ ತಂಡದಲ್ಲಿದ್ದವರಲ್ಲಿ ಒಬ್ಬ ಕನ್ನಡ ಮಾತನಾಡುತ್ತಿದ್ದರೆ, ಉಳಿದವರು ಇಂಗ್ಲೀಷ್, ಹಿಂದಿಯಲ್ಲಿ ಮಾತನಾಡುತ್ತಿದ್ದರು ಎನ್ನಲಾಗಿದ್ದು, ಹೊರಗಿನವರು ಕೃತ್ಯವೆಸಗಿರುವ ಶಂಕೆ ಹಿನ್ನಲೆಯಲ್ಲಿ ಎಲ್ಲಾ ಆಯಾಮಗಳಿಂದಲೂ ತನಿಖೆ ಕೈಗೊಳ್ಳಲಾಗಿದೆ.