HomeKarnatakaಜ. 5ರಿಂದ ದಾವಣಗೆರೆಯಲ್ಲಿ ರಾಜ್ಯಮಟ್ಟದ ಯುವಜನೋತ್ಸವ: ಸ್ಪರ್ಧಿಗಳಿಗೆ ಮಾಂಸಾಹಾರವೂ ಲಭ್ಯ

ಜ. 5ರಿಂದ ದಾವಣಗೆರೆಯಲ್ಲಿ ರಾಜ್ಯಮಟ್ಟದ ಯುವಜನೋತ್ಸವ: ಸ್ಪರ್ಧಿಗಳಿಗೆ ಮಾಂಸಾಹಾರವೂ ಲಭ್ಯ

ದಾವಣಗೆರೆ: ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯಿಂದ ನಡೆಸುವ ರಾಜ್ಯ ಮಟ್ಟದ ಯುವಜನೋತ್ಸವ ಜನವರಿ 5 ಮತ್ತು 6 ರಂದು ನಡೆಯಲಿದ್ದು, ನಗರದ ಎಂ.ಬಿ.ಎ. ಮೈದಾನದ ಮುಖ್ಯ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸುವರು ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ತಿಳಿಸಿದರು.

ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಯುವಜನೋತ್ಸವ ಕಾರ್ಯಕ್ರಮದ ಸಿದ್ದತೆಗೆ ಜಿಲ್ಲಾಡಳಿತದಿಂದ ಕೈಗೊಂಡಿರುವ ಕಾರ್ಯಕ್ರಮ ರೂಪುರೇಷೆಗಳ ಬಗ್ಗೆ ವಿವಿಧ ಉಪ ಸಮಿತಿಗಳೊಂದಿಗೆ ಸಭೆ ನಡೆಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಯುವಜನೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸೇರಿದಂತೆ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಜನಪ್ರತಿನಿಧಿಗಳು ಮತ್ತು ಯುವ ಪ್ರಶಸ್ತಿ ಪುರಸ್ಕೃತರು ಭಾಗವಹಿಸುವರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 7 ಸ್ಪರ್ಧೆಗಳು;

ರಾಜ್ಯ ಮಟ್ಟದ ಯುವಜನೋತ್ಸವ ಸ್ಪರ್ಧೆಯಲ್ಲಿ 7 ಸ್ಪರ್ಧೆಗಳಿದ್ದು, ಪ್ರತ್ಯೇಕವಾಗಿ ನಡೆಯಲಿವೆ. ಜಾನಪದ ನೃತ್ಯ ಸ್ಪರ್ಧೆಯು ಬಿಐಇಟಿ ಕಾಲೇಜಿನ ಎಸ್.ಎಸ್.ಎಂ. ಸಾಂಸ್ಕೃತಿಕ ಸಭಾಂಗಣ, ಜಾನಪದ ಗೀತೆ ಸ್ಪರ್ಧೆಯು ಬಾಪೂಜಿ ಎಂಬಿಎ ಕಾಲೇಜು ಸಭಾಂಗಣ, ವಿಜ್ಞಾನ ವಸ್ತು ಪ್ರದರ್ಶನ ಎಂಬಿಎ ಮೈದಾನದಲ್ಲಿನ ಎಸ್.ಎಸ್. ಪಬ್ಲಿಕ್ ಸ್ಕೂಲ್, ಕವನ ರಚನೆ ಎಂಬಿಎ ಕಾಲೇಜಿನ ಕೊಠಡಿ 1, ಕಥೆ ಬರೆಯುವುದು ಇಲ್ಲಿನ ಕೊಠಡಿ 2 ರಲ್ಲಿ ಹಾಗೂ ಚಿತ್ರಕಲೆ ಸ್ಪರ್ಧೆ ಮತ್ತು ಘೋಷಣ ಸ್ಪರ್ಧೆಯು ಲಲಿತ ಕಲಾ ಮಹಾವಿದ್ಯಾಲಯದಲ್ಲಿ ನಡೆಯಲಿದೆ.

ರಾಜ್ಯ ಎಲ್ಲಾ ಜಿಲ್ಲೆಗಳಿಂದ 7 ಸ್ಪರ್ಧೆಗಳಲ್ಲಿ ಭಾಗವಹಿಸಲು ಯುವ ಸ್ಪರ್ಧಾಳುಗಳು ಆಗಮಿಸುವರು. ಇಲ್ಲಿನ ಸ್ಪರ್ಧೆಯಲ್ಲಿ ವಿಜೇತರಾಗುವವರಿಗೆ ಮೊದಲ ಬಹುಮಾನವಾಗಿ 25000 ರೂ., ದ್ವಿತೀಯ 15000 ರೂ. ಮತ್ತು ತೃತೀಯ ಬಹುಮಾನವಾಗಿ 10000 ರೂ. ಪ್ರಶಸ್ತಿ ಪತ್ರದೊಂದಿಗೆ ನಗದು ನೀಡಲಾಗುತ್ತದೆ. ಇಲ್ಲಿ ವಿಜೇತರಾದವರು ಜನವರಿ 11 ಮತ್ತು 12 ರಂದು ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಯುವಜನೋತ್ಸವದಲ್ಲಿ ಭಾಗವಹಿಸುವರು.

ಜನಪದ ರ್ಯಾಲಿ;

ಯುವಜನೋತ್ಸವವು ಜನವರಿ 5 ರಂದು ಬೆಳಗ್ಗೆ ಉದ್ಘಾಟನೆಯಾಗಲಿದ್ದು, ಇದರ ಅಂಗವಾಗಿ ಬೆಳಗ್ಗೆ 9 ಗಂಟೆಯಿಂದ ವಿವಿಧ ಕಲಾತಂಡಗಳೊಂದಿಗೆ ಹಾಗೂ ಶಾಲಾ, ಕಾಲೇಜು ವಿದ್ಯಾರ್ಥಿಗಳೊಂದಿಗೆ ಜನಪದ ಮೆರವಣಿಗೆ ಮೂಲಕ ಎಂಬಿಎ ಮೈದಾನಕ್ಕೆ ತೆರಳಿ ಉದ್ಘಾಟನೆಯಲ್ಲಿ ಭಾಗಿಯಾಗಲಿದ್ದಾರೆ. ಕಲಾಮೇಳದಲ್ಲಿ ದಕ್ಷಿಣ ವಲಯದ ಸಾಂಸ್ಕೃತಿಕ ಕೇಂದ್ರದಿಂದ 10 ಕ್ಕಿಂತ ಹೆಚ್ಚು ತಂಡಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 10 ಕ್ಕೂ ಹೆಚ್ಚು ಕಲಾ ತಂಡಗಳು ಸೇರಿದಂತೆ ವಿವಿಧ ಕಾಲೇಜುಗಳು ವಿದ್ಯಾರ್ಥಿಗಳ ತಂಡಗಳು ಕಲಾ ಮೇಳದಲ್ಲಿ ಭಾಗಿಯಾಗಲಿದ್ದು ಆಕರ್ಷಕ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.

ಕದ್ರಿ ಮಣಿಕಂಠ ಮತ್ತು ತಂಡದಿಂದ ಸಾಂಸ್ಕೃತಿಕ ಸಂಜೆ;

ಯುವಜನೋತ್ಸವ ಅಂಗವಾಗಿ ಖ್ಯಾತ ಕಲಾವಿದರಾದ ಕದ್ರಿ ಮಣಿಕಂಠ ಮತ್ತು ತಂಡದವರಿಂದ ಜನವರಿ 5 ರ ಸಂಜೆ 5 ಗಂಟೆಯಿಂದ ಪ್ರಧಾನ ವೇದಿಕೆ ಎಂಬಿಎ ಮೈದಾನದಲ್ಲಿ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ವೇದಿಕೆಯಲ್ಲಿ ಐದು ಸಾವಿರಕ್ಕಿಂತಲೂ ಹೆಚ್ಚು ಆಸನದ ವ್ಯವಸ್ಥೆ ಮಾಡಲಾಗಿದ್ದು, ಸುಮಾರು 10 ಸಾವಿರಕ್ಕೂ ಹೆಚ್ಚಿನ ಜನರು ಸೇರುವ ನಿರೀಕ್ಷೆ ಹೊಂದಲಾಗಿದೆ. ಗ್ಲಾಸ್ ಹೌಸ್‍ ನಲ್ಲಿ ಫಲಪುಷ್ಪ ಪ್ರದರ್ಶನ ಭಾನುವಾರದಿಂದ ನಡೆಯುತ್ತಿದ್ದು, ಜನವರಿ 5 ರವರೆಗೆ ಯುವಜನೋತ್ಸವ ಹಿನ್ನಲೆಯಲ್ಲಿ ಮುಂದುವರೆಸಲಾಗಿದ್ದು ದಾವಣಗೆರೆ ಜನತೆಯು ಯುವಜನೋತ್ಸವವನ್ನು ವೀಕ್ಷಣೆ ಮಾಡುವ ಮೂಲಕ ಪ್ರೋತ್ಸಾಹಿಸಬೇಕಾಗಿದೆ ಎಂದರು.

 ಯುವಜನೋತ್ಸವ ವೀಕ್ಷಣೆಗೆ ನಗರ ಸಾರಿಗೆ;

ಜನವರಿ 5 ಮತ್ತು 6 ರಂದು ನಡೆಯುವ ಯುವಜನೋತ್ಸವ ವೀಕ್ಷಣೆಗಾಗಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಕೆಎಸ್‍ಆರ್‍ಟಿಸಿ ಯಿಂದ ನಿರಂತರ ಬಸ್ ಸೇವೆಯನ್ನು ಒದಗಿಸಲಾಗುತ್ತಿದೆ. ವೀಕ್ಷಣೆ ಮಾಡುವವರು ಈ ಬಸ್ ಸೌಲಭ್ಯ ಪಡೆಯಬಹುದಾಗಿದ್ದು, ಎಲ್ಲಾ ವೇದಿಕೆಗಳಿಗೂ ಬಸ್ ಕರೆದುಕೊಂಡು ಹೋಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಊಟದ ವ್ಯವಸ್ಥೆ, ಕುಡಿಯುವ ನೀರು ಸೇರಿದಂತೆ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗುತ್ತಿದೆ. ವಿವಿಧ ಜಿಲ್ಲೆಗಳಿಂದ ಆಗಮಿಸುವ ಯುವ ಸ್ಪರ್ಧಾಳುಗಳಿಗೆ ಊಟ, ವಸತಿ ಸೇರಿದಂತೆ ಜಿಲ್ಲೆಯಲ್ಲಿನ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸ ಹಮ್ಮಿಕೊಳ್ಳಲು ಸೂಕ್ತ ವಾಹನಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.ಸ್ಪರ್ಧಿಗಳಿಗೆ ರಾತ್ರಿ ಊಟಕ್ಕೆ ಮಾಂಸಾಹಾರವನ್ನೂ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್ ಎಂ.ಸಂತೋಷ್, ಪಾಲಿಕೆ ಆಯುಕ್ತೆ ರೇಣುಕಾ ಇನ್ನಿತರರು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular