ವಾಷಿಂಗ್ಟನ್: ಕೊರೋನಾ ವೈರಸ್ ಚೀನಾ ಲ್ಯಾಬ್ ನಿಂದ ಸೋರಿಕೆಯಾಗಿದೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
ಅಮೆರಿಕ ಅಧ್ಯಕ್ಷ ಬೈಡೆನ್ ತಡೆಯೊಡ್ಡಿದ್ದರಿಂದ ವರದಿ ಬಹಿರಂಗವಾಗಿಲ್ಲವೆಂದು ಹೇಳಲಾಗಿದೆ. ಚೀನಾ ಪ್ರಯೋಗಾಲಯದಿಂದಲೇ ಕೋವಿಡ್ ಸೋಂಕಿನ ವೈರಾಣು ಸೋರಿಕೆಯಾಗಿತ್ತು ಎನ್ನುವ ಸಂಗತಿಯನ್ನು ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಬಹಿರಂಗಪಡಿಸಿದೆ.
ಎಫ್.ಬಿ.ಐ. ಮಾಜಿ ವಿಜ್ಞಾನಿ ಹಾಗೂ ಸೂಕ್ಷ್ಮ ಜೀವ ವಿಜ್ಞಾನ ವೈದ್ಯ ಜೇಸನ್ ಬನ್ನನ್ ಅವರ ತಂಡ ಕೋವಿಡ್ ಮೂಲವನ್ನು ಪತ್ತೆ ಮಾಡಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಸತ್ಯಶೋಧನಾ ವರದಿಯನ್ನು ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುತ್ತಿರುವ ಜೋಬೈಡನ್ ಅವರಿಗೆ ಸಲ್ಲಿಸಲು ತನಿಖಾ ಸಂಸ್ಥೆಗೆ ಇನ್ನೂ ಅನುಮತಿ ನೀಡಿಲ್ಲವೆಂದು ಹೇಳಲಾಗಿದೆ.
2021 ರಲ್ಲಿ ಅಮೆರಿಕ ಅಧ್ಯಕ್ಷ ಜೋಬೈಡೆನ್ ಅವರು ಕೊರೋನಾ ವೈರಸ್ ಮೂಲ ಪತ್ತೆಗೆ ಆದೇಶ ನೀಡಿದ್ದರು. ಎಫ್.ಬಿ.ಐ. ನೇತೃತ್ವದಲ್ಲಿ ರಾಷ್ಟ್ರೀಯ ಗುಪ್ತಚರ ಮಂಡಳಿ ವಿಜ್ಞಾನಿಗಳು ಮತ್ತು ವೈದ್ಯರು ಕೋವಿಡ್ ವೈರಸ್ ಮೂಲದ ಪತ್ತೆಗೆ ಅಧ್ಯಯನ ನಡೆಸಿದ್ದು, 2021ರ ಆಗಸ್ಟ್ ನಲ್ಲಿ ಬೈಡೆನ್ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಲಾಗಿತ್ತು. ವೈರಾಣು ಪ್ರಾಣಿಗಳಿಂದ ಹರಡಿರುವ ಸಾಧ್ಯತೆ ತೀರ ಕಡಿಮೆ ಎಂದು ತನಿಖಾ ತಂಡ ವರದಿ ನೀಡಿತ್ತು. ತನಿಖೆ ಮುಂದುವರೆಸಿದ್ದು, ಪ್ರಯೋಗಾಲಯದಿಂದ ವೈರಸ್ ಸೋರಿಕೆಯಾಗಿರುವ ಸಂಭವ ಹೆಚ್ಚಿದೆ ಎನ್ನುವುದನ್ನು ಕಂಡುಕೊಂಡಿದ್ದಾರೆ. ಚೀನಾ ಪ್ರಯೋಗಾಲಯದಿಂದ ಇದು ಸೋರಿಕೆಯಾಗಿದೆ ಎಂಬುದು ನಮ್ಮ ನಂಬಿಕೆಯಾಗಿದೆ ಎಂದು ವಿಜ್ಞಾನಿ ಜೇಸನ್ ಬನ್ನನ್ ಹೇಳಿದ್ದಾರೆ.