ಕಲಬುರಗಿ: 371 ಜೆ ಜಾರಿಯಿಂದ ಕಲ್ಯಾಣ ಕರ್ನಾಟಕ ಭಾಗದ ಸಹಸ್ರಾರು ವಿದ್ಯಾವಂತರು ಉತ್ತಮ ಹುದ್ದೆಗಳನ್ನು ಪಡೆಯಲು ಸಾಧ್ಯವಾಗಿದೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.
ಕಲಬುರಗಿಯಲ್ಲಿ ನಿರ್ಮಾಣಗೊಂಡಿರುವ ಜಯದೇವ ಹೃದ್ರೋಗ ಆಸ್ಪತ್ರೆಯ ನೂತನ ಕಟ್ಟಡದ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿ, ನಮ್ಮ ಸರ್ಕಾರ ಉತ್ತರ ಕರ್ನಾಟಕ ಸೇರಿದಂತೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ನೀಲನಕ್ಷೆ ಸಿದ್ದಪಡಿಸಿಕೊಂಡಿದ್ದೇವೆ. ಇದು ನಮ್ಮ ಸರ್ಕಾರದ ಬದ್ಧತೆ. ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ಇಲ್ಲಿನ ವಿಶ್ವ ವಿದ್ಯಾಲಯಗಳಲ್ಲಿ ನೂತನ ಹೊಸ ಕೋರ್ಸ್ ಗಳನ್ನು ಆರಂಭಿಸುವುದು ಮತ್ತು ಖಾಲಿ ಇರುವ ಹುದ್ದೆಗಳನ್ನು ತುಂಬುವ ಕೆಲಸವನ್ನೂ ಮಾಡಲಾಗುವುದು ಎಂದು ಹೇಳಿದ್ದಾರೆ.
ತೊಗರಿ ಬೆಳೆ ಪ್ಯಾಕೇಜ್ ಬಗ್ಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಅಜಯ್ ಸಿಂಗ್ ಮತ್ತು ಇಲ್ಲಿನ ಶಾಸಕರು, ಸಚಿವರು ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ವರದಿ ಕೇಳಿದ್ದೇನೆ. ವರದಿ ಬಂದ ಕೂಡಲೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಈಗಾಗಲೇ ಅನುಭವ ಮಂಟಪ ನಿರ್ಮಾಣ ಅರ್ಧ ಮುಗಿದಿದೆ. ಪೂರ್ಣಗೊಳಿಸಲು ಅಗತ್ಯ ಹಣ ನೀಡಲಾಗಿದೆ. ಇನ್ನೂ ಅಗತ್ಯಬಿದ್ದರೆ ಹಣ ನೀಡಲಾಗುವುದು. ಹಣಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ.