ಬೆಳಗಾವಿ: ನೀರಾವರಿ ಯೋಜನೆಗೆ ಬಳಸಿದ 70 ಲಕ್ಷ ರೂಪಾಯಿ ಬಿಲ್ ಪಾವತಿಸುವಂತೆ ಸಿದ್ಧಗಂಗಾ ಮಠಕ್ಕೆ ಕೆಐಎಡಿಬಿ ನೀಡಿದ್ದ ನೋಟಿಸ್ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಸಿದ್ಧಗಂಗಾ ಮಠಕ್ಕೆ ನೋಟಿಸ್ ವಿಚಾರ ಚರ್ಚೆಗೆ ಕಾರಣವಾಗುತ್ತಿದ್ದಂತೆ ಎಚ್ಚೆತ್ತ ಸರ್ಕಾರ ನೋಟಿಸ್ ಹಿಂಪಡೆದಿದೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್, ಕೆಐಎಡಿಬಿಯ ಕೆರೆಯಿಂದ ಮಠದವರು ನೀರು ತೆಗೆದುಕೊಂಡಿದ್ದಾರೆ. ನೀರು ಬಳಸಿದ್ದರೆ ತಪ್ಪಿಲ್ಲ. ನೀರೇ ಬಳಸದೇ ನೋಟಿಸ್ ನೀಡಿದ್ದರೆ ಅದು ತಪ್ಪು. ಒಂದು ವೇಳೆ ಹಾಗೆ ಮಾಡಿದ್ದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸಿದ್ಧಗಂಗಾ ಮಠ ವಿಶ್ವಕ್ಕೆ ಮಾದರಿಯಾದ ಮಠ. ಮಕ್ಕಳಿಗೆ ಶಿಕ್ಷಣ, ದಾಸೋಹ ನೀಡುತ್ತಿರುವ ಮಠ. ಈ ಬಗ್ಗೆ ಮುಖ್ಯ ಇಂಜಿನಿಯರ್ ಸ್ವಾಮೀಜಿಗಳ ಜೊತೆ ಮಾತನಾಡಿದ್ದಾರೆ. ನಾನೂ ಕೂಡ ಸ್ವಾಮೀಜಿ ಜೊತೆ ಮಾತನಾಡುತ್ತೇನೆ. ಮಠದಿಂದ ಕೆರೆ ನೀರು ಬಳಸಿಕೊಂಡರೆ ತಪ್ಪಿಲ್ಲ. ಈಗಾಗಲೇ ನೀಡಿರುವ ನೋಟಿಸ್ ಹಿಂಪಡೆಯಲಾಗುವುದು ಎಂದರು.
ಕೆರೆ ನೀರು ಬಳಸದೇ ನೋಟಿಸ್ ನೀಡಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮುಂದೆಯೂ ಸಿದ್ಧಗಂಗಾ ಮಠ ನೀರು ಬಳಸಬಹುದು. ಸಿಎಸ್ ಆರ್ ಲೆಕ್ಕದಲ್ಲಿ ನಾವು ಉಚಿತವಾಗಿಯೇ ನೀರು ಕೊಡುತ್ತೇವೆ. ಮಠ ಯಾವಾಗಬೇಕಾದರೂ ನೀರು ಬಳಸಿಕೊಳ್ಳಬಹುದು ಎಂದು ತಿಳಿಸಿದರು.