ಬೆಳಗಾವಿ: ರಾಜ್ಯದಲ್ಲಿ ಮುಜರಾಯಿ ಆಸ್ತಿಗಳ ಸಂರಕ್ಷಣೆಯನ್ನು ಅಭಿಯಾನ ಮಾದರಿಯಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ.
ಈ ವರ್ಷ ರಾಜ್ಯದಲ್ಲಿ 5,022 ಮುಜರಾಯಿ ಆಸ್ತಿಗಳನ್ನು ಮುಜರಾಯಿ ಇಲಾಖೆಗೆ ಖಾತೆ ಮಾಡಿಕೊಡುವ ಮೂಲಕ ಸಂರಕ್ಷಣೆ ಮಾಡಿದ್ದು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದ ಮುಜರಾಯಿ ಆಸ್ತಿಗಳ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಶ್ರೀರಂಗಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಾಲಯಕ್ಕೆ ದಾನವಾಗಿ ನೀಡಿರುವ 1198.34 ಎಕರೆ ಜಾಗದಲ್ಲಿ ಒತ್ತುವರಿಯಾಗಿರುವ ಜಾಗದ ವಿಷಯದ ಕುರಿತಂತೆ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಒತ್ತುವರಿ ಜಾಗವನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.