ಜೀ ಕನ್ನಡ ವಾಹಿನಿಯಲ್ಲಿ ಇಂದಿನಿಂದ ಪ್ರತಿ ಶನಿವಾರ ಮತ್ತು ಭಾನುವಾರ 7.30ಕ್ಕೆ ‘ಸರಿಗಮಪ’ ಸೀಸನ್ 21 ಪ್ರಸಾರವಾಗಲಿದೆ.
ರಾಜ್ಯದ 31 ಜಿಲ್ಲೆಗಳ ವಿವಿಧ ಪ್ರತಿಭೆಗಳಿಗೆ ಈ ಶೋನಲ್ಲಿ ಅವಕಾಶ ಸಿಕ್ಕಿದೆ. ಈ ಬಾರಿ ವಯಸ್ಸಿನ ಅಂತರವಿಲ್ಲದೆ 6 ವರ್ಷದಿಂದ 60 ವರ್ಷದ ಪ್ರತಿಭಾವಂತರಿಗೆ ಅವಕಾಶ ನೀಡಲಾಗಿದೆ. ‘ಸರಿಗಮಪ’ ತಂಡ ಈಗಾಗಲೇ ಆಡಿಷನ್ ಮಾಡಿ 60 ಹಾಡುಗಾರರನ್ನು ಆಯ್ಕೆ ಮಾಡಿದೆ. ಜನಸಾಮಾನ್ಯರು ತಾವೇ ತೀರ್ಪುಗಾರರಾಗಿ ಹಾಡುಗಾರರನ್ನು ಆಯ್ಕೆ ಮಾಡಿದ್ದಾರೆ. ಇದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಜೀ ಕನ್ನಡ ವಾಹಿನಿ ಖಾತೆಯೊಂದನ್ನು ತೆರೆದಿತ್ತು. ಹಾಡುಗಾರರು ಹಾಡಿದ ಹಾಡಿನ ಕ್ಲಿಪ್ ಅನ್ನು ಅಲ್ಲಿ ಹಾಕಲಾಗಿದ್ದು, ಜನಸಾಮಾನ್ಯರು ಯಾರ ಹಾಡು ಇಷ್ಟವಾಯಿತು ಎಂದು ಆರಿಸಿ ಲೈಕ್ಸ್ ನೀಡಬೇಕಿತ್ತು. ಈ 60 ಜನರಲ್ಲಿ ಯಾರು ಆಯ್ಕೆಯಾಗಿದ್ದಾರೋ ಅವರನ್ನು ಮೆಗಾ ಆಡಿಶನ್ ನಲ್ಲಿ ಕಾರ್ಯಕ್ರಮದ ತೀರ್ಪುಗಾರರು ಆಯ್ಕೆ ಮಾಡಲಿದ್ದಾರೆ.
ರಾಜೇಶ್ ಕೃಷ್ಣನ್, ಅರ್ಜುನ್ ಜನ್ಯ, ವಿಜಯ ಪ್ರಕಾಶ್ ತೀರ್ಪುಗಾರರಾಗಿರುತ್ತಾರೆ. ಈಗಾಗಲೇ ಕನ್ನಡ ಸಂಗೀತ ಕ್ಷೇತ್ರಕ್ಕೆ ಹಲವು ಹಾಡುಗಾರರನ್ನು ಕೊಡುಗೆಯಾಗಿ ನೀಡಿರುವ ‘ಸರಿಗಮಪ’ ವೇದಿಕೆ ಇನ್ನು ಹಲವು ಪ್ರತಿಭೆಗಳನ್ನು ಜನರ ಮುಂದಿಡಲು ಮುಂದಾಗಿದೆ.