ಬೆಳಗಾವಿ(ಸುವರ್ಣಸೌಧ): ರಾಜ್ಯದಲ್ಲಿ ಆನೆ ಹಾವಳಿ ತಡೆಗೆ ಕೊಡಗು, ಹಾಸನ ಜಿಲ್ಲೆಗಳ ವ್ಯಾಪ್ತಿಯಲ್ಲಿ 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆನೆಗಳ ವಿಹಾರಧಾಮ ಸ್ಥಾಪಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಬೇಲೂರು ಜೆಡಿಎಸ್ ಶಾಸಕ ಹೆಚ್.ಕೆ. ಸುರೇಶ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಆನೆ ದಾಳಿ ತಡೆಗೆ ಸೋಲಾರ್ ಬೇಲಿ ಅಳವಡಿಕೆ, ಆನೆ ಕಂದಕ ನಿರ್ಮಾಣದಂತಹ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರೊಂದಿಗೆ ಕೊಡಗು, ಹಾಸನ ವ್ಯಾಪ್ತಿಯಲ್ಲಿ 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆನೆಗಳ ವಿಹಾರಧಾಮ ನಿರ್ಮಿಸಲಾಗುವುದು. ಎಲ್ಲೇ ಆನೆಗಳನ್ನು ಸೆರೆಹಿಡಿದರೂ ಅಲ್ಲಿಗೆ ತಂದು ಬಿಡಲಾಗುತ್ತದೆ. ಇದರಿಂದ ಆನೆಗಳು ಜನವಸತಿ ಪ್ರದೇಶಕ್ಕೆ ಬರುವುದು ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.
ಪ್ರಾಣಿಗಳ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ನೀಡುವ ಪರಿಹಾರವನ್ನು 7.5 ಲಕ್ಷ ರೂ.ನಿಂದ 15 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.